
ಭೂಪಾಲ್: ಮಧ್ಯಪ್ರದೇಶದ ಖಟ್ಲಾಪುರ ಘಾಟ್ ಬಳಿ ಇಂದು ಬೆಳಗ್ಗೆ ಗಣೇಶ ವಿಗ್ರಹ ವಿಸರ್ಜನೆ ವೇಳೆಯಲ್ಲಿ ಧೋಣಿ ದುರಂತ ಸಂಭವಿಸಿದ್ದು, 11 ಮಂದಿ ದುರ್ಮರಣ ಹೊಂದಿದ್ದಾರೆ. ಐವರನ್ನು ರಕ್ಷಿಸಲಾಗಿದೆ.
ಈವರೆಗೂ 11 ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ. 16 ಜನರಲ್ಲಿ ಐವರನ್ನು ರಕ್ಷಿಸಲಾಗಿದೆ. ಇತರರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಖಿಲ್ ಪಟೇಲ್ ಹೇಳಿದ್ದಾರೆ.
ಬೆಳಗ್ಗೆ 4-30ರ ಸುಮಾರಿನಲ್ಲಿ ಈ ದುರಂತ ಸಂಭವಿಸಿದೆ. ಮುಳುಗು ತಜ್ಞರೊಂದಿಗೆ 40 ಮಂದಿ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡ ಕೂಡಾ ದುರ್ಘಟನಾ ಸ್ಥಳದಲ್ಲಿರುವುದಾಗಿ ಅವರು ತಿಳಿಸಿದ್ದಾರೆ.
ದೋಣಿ ದುರಂತದಲ್ಲಿ ಮೃತಪಟ್ಟ ಕುಟುಂಬ ಸದಸ್ಯರಿಗೆ ತಲಾ 4 ಲಕ್ಷ ರೂ. ಪರಿಹಾರವನ್ನು ಮಧ್ಯ ಪ್ರದೇಶ ಸಚಿವ ಪಿ. ಸಿ. ಶರ್ಮಾ ಪ್ರಕಟಿಸಿದ್ದಾರೆ. ಇದೊಂದು ದುರದೃಷ್ಟಕರ ಸಂಗತಿಯಾಗಿದೆ. ಜಿಲ್ಲಾಧಿಕಾರಿಗಳಿಂದ ಪರಿಹಾರವನ್ನು ವಿತರಿಸಲಾಗುವುದು, ಈ ದುರಂತ ಸಂಭದ ತನಿಖೆ ನಡೆಸಲಾಗುವುದು ಎಂದು ಶರ್ಮಾ ಹೇಳಿದ್ದಾರೆ.