ನವದೆಹಲಿ: ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಸಿಖ್ ವಿದೇಶಿಯರ ಕಪ್ಪುಪಟ್ಟಿಯಿಂದ 312 ಮಂದಿಯ ಹೆಸರನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ.
ಈ ಮೂಲಕ ಕಪ್ಪು ಪಟ್ಟಿಯಿಂದ ಹೊರಬಂದಿರುವ 312 ಮಂದಿ ವಿದೇಶಿಯರು ಇನ್ನು ಮುಂದೆ ಭಾರತೀಯ ವೀಸಾ ಪಡೆಯಲು ಮತ್ತು ಸಾಗರೋತ್ತರ ಭಾರತೀಯ ಕಾರ್ಡನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಗೃಹ ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ ವಿದೇಶಿ ಧರ್ಮ ಪ್ರಚಾರ ಕೇಂದ್ರಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.
ಇವರಿಂದ ಭಾರತಕ್ಕೆ ಬೆದರಿಕೆಯಿರುವ ಹಿನ್ನಲೆಯಲ್ಲಿ ಕಪ್ಪುಪಟ್ಟಿಯಿಂದ ವಿದೇಶಿ ಸಿಖ್ಖರನ್ನು ಹೊರಗಿಡಲು ಸರ್ಕಾರ ತೀರ್ಮಾನಿಸಿದೆ. ಇದರಿಂದ ಅವರಿಗೆ ಭಾರತಕ್ಕೆ ಬಂದು ತಮ್ಮ ಕುಟುಂಬದವರನ್ನು ಭೇಟಿ ಮಾಡಲು ಸಹಾಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1980ರ ದಶಕದಲ್ಲಿ ಭಾರತದಲ್ಲಿ ಸಿಖ್ಖರಿಗೆ ಪ್ರತ್ಯೇಕ ನೆಲ ಬೇಕೆಂದು ಉಗ್ರವಾದ ಚಳವಳಿ ತೀವ್ರವಾಗಿದ್ದ ಸಮಯದಲ್ಲಿ ಸಿಖ್ ಸಮುದಾಯಕ್ಕೆ ಸೇರಿದ ಹಲವು ಭಾರತೀಯರು ಮತ್ತು ವಿದೇಶಿಯರು ಭಾರತ ವಿರೋಧಿ ಪ್ರಚಾರ ನಡೆಸುತ್ತಿದ್ದರು. ಕೆಲವರು ಭಾರತವನ್ನು ತೊರೆದುಹೋಗಿ ವಿದೇಶಗಳಲ್ಲಿ ಹೋಗಿ ನೆಲೆಸಿ ಅಲ್ಲಿನ ಪ್ರಜೆಗಳಾಗಿಬಿಟ್ಟರು. ಅಂತವರನ್ನು 2016ರವರೆಗೆ ಕಪ್ಪುಪಟ್ಟಿಯಲ್ಲಿ ಇರಿಸಲಾಗಿತ್ತು. ಅವರಿಗೆ ಭಾರತಕ್ಕೆ ಭೇಟಿ ನೀಡಲು ವೀಸಾ ಸೌಲಭ್ಯ ಕೂಡ ಸಿಗುತ್ತಿರಲಿಲ್ಲ.
ಕಪ್ಪುಪಟ್ಟಿಯಲ್ಲಿ ಸೇರಿಸಿದ್ದರಿಂದ ಅದರಲ್ಲಿ ಸೇರಿದ್ದ ಸಿಖ್ಖರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಭಾರತೀಯ ದೂತಾವಾಸ ಸೇವೆ ಲಭ್ಯವಾಗುತ್ತಿರಲಿಲ್ಲ. ಇಂತವರನ್ನು ಇದೀಗ ಕಪ್ಪುಪಟ್ಟಿಯಿಂದ ತೆಗೆದುಹಾಕಿರುವುದರಿಂದ ಇನ್ನು ಮುಂದೆ ಭಾರತೀಯ ವೀಸಾ ಪಡೆದು ಇಲ್ಲಿ ದೀರ್ಘಸಮಯ ನೆಲೆಸಬಹುದು. ಅಲ್ಲದೆ ಸಾಗರೋತ್ತರ ಭಾರತೀಯ ನಾಗರಿಕರ ಗುರುತು ಚೀಟಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ವೀಸಾ ಮೂಲಕ ಭಾರತದಲ್ಲಿ ಎರಡು ವರ್ಷಗಳವರೆಗೆ ನೆಲೆಸಬಹುದು.