ಬೆಂಗಳೂರು, ಸೆ.12- ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಕೆ ಮಾಡುವ ಬದಲು ಪರಿಸರ ಸ್ನೇಹಿ ವಸ್ತುಗಳಿಂದ ಸಿದ್ಧಪಡಿಸಲಾದ ಉತ್ಪನ್ನಗಳನ್ನೇ ಬಳಸಬೇಕೆಂದು ಮೇಯರ್ ಗಂಗಾಂಬಿಕೆ ಕರೆ ನೀಡಿದರು.
ಬಿಬಿಎಂಪಿಯು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯವಾಗಿ ಉಪಯೋಗಿಸಬಹುದಾದಂತಹ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ವಿಶೇಷ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆಯನ್ನು ಪೆÇ್ರೀ ಮೂರು ದಿನಗಳ ವಿಶೇಷ ಮೇಳ ಆಯೋಜಿಸಲಾಗಿದೆ.ಇದರಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಸಹಕರಿಸಬೇಕೆಂದು ಮೇಯರ್ ಮನವಿ ಮಾಡಿದರು.
ಸುಮಾರು 50ಕ್ಕೂ ಹೆಚ್ಚಿನ ಪ್ಲಾಸ್ಟಿಕೇತರ ವಸ್ತುಗಳ ಉತ್ಪಾದಕರು, ವಿತರಕರು, ಮಾರಾಟಗಾರರು ಮೇಳದಲ್ಲಿ ಭಾಗವಹಿಸಿ ಪರಿಸರ ಸ್ನೇಹಿ ವಸ್ತುಗಳನ್ನು ಪ್ರದರ್ಶಿಸಿ ಪರಿಚಯಿಸಲಿದ್ದಾರೆ.ಮೂರು ದಿನಗಳ ಕಾಲ ಬೆಳಗ್ಗೆ 9 ರಿಂದ ರಾತ್ರಿ 8 ಗಂಟೆರ ವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಹೇಳಿದರು.
ಪರಿಸರ ಸ್ನೇಹಿ ಪೇಪರ್ ಬ್ಯಾಗ್, ಬಟ್ಟೆ ಬ್ಯಾಗ್, ಅಡಿಕೆ ತಟ್ಟೆಗಳು, ಸ್ಟೀಲ್, ಸಿರಾಮಿಕ್, ಮೆಲಮಿನ್, ಗಾಜಿನ ತಟ್ಟೆಗಳು, ಬಾಳೆ ಎಲೆ, ಕಬ್ಬಿಣ ತ್ಯಾಜ್ಯದಿಂದ ತಯಾರಿಸಿದ ತಟ್ಟೆಗಳು, ಮುತ್ತುಗದ ಎಲೆ ತಟ್ಟೆಗಳು, ಕಟ್ಟಿಗೆ ಹಾಗೂ ಸ್ಟೀಲ್ ಚಮಚಗಳು, ಹೋಟೆಲ್ಗಳಲ್ಲಿ ಕಬ್ಬಿನ ತ್ಯಾಜ್ಯದಿಂದ ತಯಾರಿಸಿದ ತಟ್ಟೆ, ಕಪ್ ಹಾಗೂ ಬಾಕ್ಸ್ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಎಲ್ಲರೂ ಪ್ಲಾಸ್ಟಿಕ್ ಉತ್ಪನ್ನಗಳ ಬದಲು ಪರ್ಯಾಯ ವಸ್ತುಗಳನ್ನೇ ಬಳಕೆ ಮಾಡಬೇಕು ಎಂದು ತಿಳಿಸಿದರು.
ಬಿಬಿಎಂಪಿಯಿಂದ ಹಂತ ಹಂತವಾಗಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲಾಗುತ್ತಿದೆ.ಪರ್ಯಾಯವಾಗಿರುವ ಉತ್ಪನ್ನಗಳ ದರ ಹೆಚ್ಚಾಗಿದೆ.ಆದರೂ ಎಲ್ಲರೂ ಅದರ ಬಳಕೆ ಮಾಡಲು ಮುಂದಾದರೆ ಕ್ರಮೇಣ ದರವೂ ಕಡಿಮೆಯಾಗಲಿದೆ. ಆದ್ದರಿಂದ ಸಾರ್ವಜನಿಕರು ಈ ವಿಶೇಷ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಿಬಿಎಂಪಿಯೊಂದಿಗೆ ಕೈ ಜೋಡಿಸಿ ಬೆಂಗಳೂರನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಮುಂದಾಗಬೇಕೆಂದು ಮೇಯರ್ ಗಂಗಾಂಬಿಕೆ ಕರೆ ನೀಡಿದರು.