ಕಾಂಗ್ರೆಸ್ ಸಹಮತಕ್ಕೆ ಬಂದರೆ ಮೈತ್ರಿಗೆ ಸಹಕಾರ-ಮಾಜಿ ಪಿಎಂ ದೇವೇಗೌಡ

ಬೆಂಗಳೂರು,ಸೆ.12-ರಾಜ್ಯದ 17 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷದೊಂದಿಗೆ ಮತ್ತೆ ಮೈತ್ರಿ ಮುಂದುವರೆಸುವ ಬಗ್ಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಲವು ತೋರಿದ್ದಾರೆ.
ಜೆಪಿಭವನದಲ್ಲಿಂದು ಪಕ್ಷದ ಅಧಿಕೃತ ವೆಬ್‍ಸೈಟ್‍ಗೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರು ರಾಜ್ಯದ ಉಪಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಯಾವ ನಿರ್ಧಾರವನ್ನು ಕೈಗೊಳ್ಳುತ್ತಾರೋ ಕಾದು ನೋಡಬೇಕು ಎಂದರು.

ಸ್ಥಳೀಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ಸೋನಿಯಾ ಗಾಂಧಿಯವರು ನಿರ್ಧಾರ ಪ್ರಕಟಿಸಬಹುದು. ಉಪಚುನಾವಣೆಯಲ್ಲಿ ಮೈತ್ರಿ ಮುಂದುವರಿಕೆಯ ಬಗ್ಗೆ ಕಾಂಗ್ರೆಸ್ ಕೈಗೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿದೆ.ಈ ಚುನಾವಣೆಯಲ್ಲಿ ನಮ್ಮನ್ನು ಬಿ ಟೀಂ ಎಂದು ಕರೆಯಲು ಸಾಧ್ಯವಿಲ್ಲ. ಮೈತ್ರಿ ಮುಂದುವರೆಸುವ ಬಗ್ಗೆ ಸ್ಥಳೀಯ ನಾಯಕರ ಭಾವನೆ ಏನಿದೆಯೋ ಗೊತ್ತಿಲ್ಲ. ದೇಶದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಹಮತಕ್ಕೆ ಬಂದರೆ ಮೈತ್ರಿಗೆ ಸಹಕಾರ ನೀಡಲಾಗುವುದು ಎಂದರು.

ಈ ಹಿಂದೆ ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದೆವು.ನಂಜನಗೂಡಿನಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನೇ ಕಾಂಗ್ರೆಸ್‍ನವರು ಕಣಕ್ಕಿಳಿಸಿ ಗೆದ್ದಿದ್ದರು.

ನಮ್ಮ ಶಕ್ತಿಯನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುತ್ತೇವೆ. ಹುಣಸೂರು, ಕೆ.ಆರ್.ಪೇಟೆ ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯರನ್ನೇ ಅಭ್ಯರ್ಥಿಯನ್ನಾಗಿ ಮಾಡಲಾಗುವುದು. ಹೊರಗಿನವರಿಗೆ ಅವಕಾಶವಿಲ್ಲ. ಹುಣಸೂರು ಕ್ಷೇತ್ರದ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಸ್ಥಳೀಯ ಅಭ್ಯರ್ಥಿಯನ್ನೇ ಆಯ್ಕೆ ಮಾಡಿಕೊಳ್ಳುವ ಭರವಸೆ ನೀಡಿದ್ದಾರೆ. ಸಂಸದ ಪ್ರಜ್ವಲ್ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸುವಂತೆ ಒತ್ತಡವಿತ್ತು.ಆದರೆ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸುವುದಿಲ್ಲ.
ಉಪಚುನಾವಣೆ ಬರಲಿ ಸಾರ್ವತ್ರಿಕ ಚುನಾವಣೆ ಬರಲಿ ಸ್ಥಳೀಯ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲಾಗುವುದು. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲೂ ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡಲಾಗುವುದು ಎಂದರು.

ಬೆದರಿಕೆ: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ 5 ಸುತ್ತಿನ ಪಕ್ಷದ ಮುಖಂಡರ ಸಭೆ ನಡೆಸಲಾಗಿದೆ. ಸಕ್ರಿಯ ಕಾರ್ಯಕರ್ತರಿಗೆ ಬೆದರಿಕೆ ಹಾಕಲಾಗುತ್ತಿದೆ.ಬೇರೆ ಬೇರೆ ಒತ್ತಡವನ್ನು ಹಾಕಿದರೆ ಸಫಲವಾಗುವುದಿಲ್ಲ. ಹೋರಾಟದ ಕೆಚ್ಚಿದ್ದು, ಭಯ ಹುಟ್ಟಿಸಲು ಬಿಡುವುದಿಲ್ಲ ಎಂದರು.
ಸ್ವಾಭಿಮಾನ ಹಾಗೂ ಕಾರ್ಯಕರ್ತರ ಶಕ್ತಿಯಿಂದ ಮತ್ತೆ ಪಕ್ಷವನ್ನು ಬಲಗೊಳಿಸಿ ದೇವರ ಆಶೀರ್ವಾದದಿಂದ ಅಧಿಕಾರಕ್ಕೆ ತರುವುದಾಗಿ ಹೇಳಿದರು.
ಪಕ್ಷದ ವೆಬ್‍ಸೈಟ್‍ನ್ನು ಮೊದಲ ಬಾರಿಗೆ ಪ್ರಾರಂಭ ಮಾಡಲಾಗಿದೆ.ಪಕ್ಷದ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಮಾಡಲಾಗುತ್ತದೆ.ರಾಜ್ಯದ ಯಾವುದೇ ಭಾಗದಲ್ಲಿ ನಡೆದ ಪಕ್ಷದ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕಟಿಸಲಾಗುತ್ತದೆ. ಅನುಭವಿ ಸಿಬ್ಬಂದಿ ಇದರ ನಿರ್ವಹಣೆ ಮಾಡುತ್ತಾರೆ. ಹೊಸ ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದ್ದೇವೆ ಎಂದರು.

ಪ್ರತಿಕ್ರಿಯಿಸುವುದಿಲ್ಲ:
ಮಾಜಿ ಸಚಿವ ಜಿ.ಟಿ.ದೇವೇಗೌಡ ಸೇರಿದಂತೆ ಯಾರ ಬಗ್ಗೆಯೂ ತಾವು ಮಾತನಾಡುವುದಿಲ್ಲ. ತಮ್ಮ 87ನೇ ವಯಸ್ಸಿನಲ್ಲೂ ಪಕ್ಷ ಕಟ್ಟಲು ಶ್ರಮಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೋನರೆಡ್ಡಿ, ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್, ಪಕ್ಷದ ಮುಖಂಡರಾದ ಜವರಾಯಗೌಡ, ನಾರಾಯಣಸ್ವಾಮಿ, ಹರೀಶ್, ಸೋಮಶೇಖರ್, ಶಫೀವುಲ್ಲಾ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ