ಮಳೆ ನಿಲ್ಲಲ್ಲಿ ಎಂದು ಶೃಂಗೇರಿ ಶಾರದಾಂಬೆಯಲ್ಲಿ ಪ್ರಾರ್ಥನೆ-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು,ಸೆ.12- ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಭಾರೀ ಪ್ರಮಾಣದಲ್ಲಿ ನಷ್ಟವಾಗಿರುವ ಹಿನ್ನೆಲೆಯಲ್ಲಿ ಮಳೆ ನಿಲ್ಲಲ್ಲಿ ಎಂದು ಶೃಂಗೇರಿ ಶಾರದಾಂಬೆಯಲ್ಲಿ ಪ್ರಾರ್ಥನೆ ಮಾಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ನಾಲ್ಕುವರೆ ದಶಕಗಳ ನಂತರ ಭೀಕರ ಅತಿವೃಷ್ಟಿ ಉಂಟಾಗಿ ಹಿಂದೆಂದೂ ಕಾಣದ ನಷ್ಟ ಸಂಭವಿಸಿದೆ. ಹೀಗಾಗಿ ಮಳೆ ನಿಲ್ಲಲ್ಲಿ ಎಂದು ಶಾರದಾಂಬೆಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

ಸಾಮಾನ್ಯವಾಗಿ ಹಿಂದೆ ಶೃಂಗೇರಿ ಶಾರದಾಂಬೆಯ ಸನ್ನಿಧಾನದಲ್ಲಿ ಮಳೆ, ನಾಡಿನ ಒಳಿತಿಗಾಗಿ ಪೂಜೆ, ಪುನಸ್ಕಾರ ಮಾಡುತ್ತಿದ್ದರು.ಇದೇ ಮೊದಲ ಬಾರಿಗೆ ಮಳೆ ನಿಲ್ಲಿಸುವಂತೆ ದೇವರಲ್ಲಿ ಬೇಡಿಕೊಂಡಿದ್ದೇನೆ. ಎಲ್ಲವೂ ಶೀಘ್ರದಲ್ಲೇ ಸರಿ ಹೋಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಸೇರಿದಂತೆ ಮತ್ತಿತರ ಕಡೆ ಈ ಬಾರಿ ಭೀಕರವಾದ ಪ್ರವಾಹ ಉಂಟಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಸಂತ್ರಸ್ತರಿಗೆ ಸರ್ಕಾರ ಎಲ್ಲ ರೀತಿಯ ನೆರವು ಒದಗಿಸಿಕೊಡುತ್ತಿದೆ.

ಮನೆ ಕಳೆದುಕೊಂಡವರಿಗೆ ಸೂರು, ಜಾನುವಾರು ಕಳೆದುಕೊಂಡವರಿಗೆ ಆರ್ಥಿಕ ನೆರವು, ಮನೆ ತಳಪಾಳಯಕ್ಕೆ ಒಂದು ಲಕ್ಷ, ಮನೆ ನಿರ್ಮಾಣಕ್ಕೆ 5 ಲಕ್ಷ ರೂ ಸೇರಿದಂತೆ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದ್ದೇವೆ ಎಂದು ಬಿಎಸ್‍ವೈ ಹೇಳಿದರು.
ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ. ಪರಿಹಾರ ಸಿಗುವುದು ವಿಳಂಬವಾಗಿರಬಹುದು.ಸದ್ಯದಲ್ಲೇ ನಮಗೆ ಉತ್ತಮವಾದ ಪರಿಹಾರ ಸಿಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲ ರಾಜಕೀಯ ಪಕ್ಷಗಳು ಅಸ್ತಿತ್ವ ಉಳಿಸಿಕೊಳ್ಳಲು ಇಂತಹ ಪ್ರತಿಭಟನೆ ಮಾಡುತ್ತವೆ ಎಂದಷ್ಟೇ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ