ನವದೆಹಲಿ: ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದೆವೆಂದು ಬೀಗುತ್ತಿದ್ದ ಕರ್ನಾಟಕದ 17 ಮಂದಿ ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟ್ನಲ್ಲಿ ಮತ್ತೆ ನಿರಾಸೆಯಾಗಿದೆ.
ಸುಪ್ರೀಂ ಕೋರ್ಟ್ನಲ್ಲಿ ಇವತ್ತಾದರೂ (ಸೆ. 11) ನಮ್ಮ ಪ್ರಕರಣದ ವಿಚಾರಣೆ ನಡೆಯುತ್ತೆ. ಬೇಗ ತೀರ್ಪು ಬರುತ್ತೆ. ಅದು ನಮ್ಮ ಪರವಾಗಿಯೇ ಇರುತ್ತೆ.
ಆದುದರಿಂದ ಈ ಕಾನೂನಿನ ಸಿಕ್ಕು ಬಿಡಿಸಿಕೊಂಡು ಆದಷ್ಟು ಬೇಗ ಮಂತ್ರಿ ಆಗಿಬಿಡಬಹುದೆಂದು ಕನಸು ಕಾಣುತ್ತಿದ್ದ ಅನರ್ಹ ಶಾಸಕರಿಗೆ ಮತ್ತೆ ಆತಂಕ ಶುರುವಾಗಿದೆ.
ಈ 17 ಮಂದಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ತಮ್ಮನ್ನು ಅನರ್ಹಗೊಳಿಸಿದ ಸ್ಪೀಕರ್ (ಈಗ ಮಾಜಿ) ರಮೇಶ್ ಕುಮಾರ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಇವತ್ತು ಬರುತ್ತೆ ಎಂದು ಅವರ ವಕೀಲರು ಭರವಸೆ ನೀಡಿದ್ದರು. ಮೇಲಾಗಿ ನ್ಯಾಯಮೂರ್ತಿಗಳಾದ ಎನ್. ವಿ. ರಮಣ ಮತ್ತು ಅಜಯ್ ರಸ್ತೋಗಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಿಗದಿಯಾಗಿತ್ತು. ಆದರೀಗ ಏಕಾಏಕಿ ಲಿಸ್ಟ್ ನಿಂದ ಈ ಅರ್ಜಿಯನ್ನು ಕೈಬಿಡಲಾಗಿದೆ. ಇದು ಶಾಸಕರ ತಳಮಳಕ್ಕೆ ಕಾರಣವಾಗಿದೆ.
ಸದ್ಯಕ್ಕೆ ಅನರ್ಹ ಶಾಸಕರಿಗೆ ತುಸು ನೆಮ್ಮದಿ ತಂದಿರುವ ಒಂದೇ ಒಂದು ಸಂಗತಿ ಎಂದರೆ ಸುಪ್ರೀಂ ಕೋರ್ಟ್ ಇವರ ಪ್ರಕರಣದ ವಿಚಾರಣೆಯನ್ನು ಇದೇ ತಿಂಗಳ 17ಕ್ಕೆ ನಿಗದಿಮಾಡಿರುವುದು. ಈ ಹಿಂದೆ ಎರಡು ಬಾರಿ ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟಿನಲ್ಲಿ ಎರಡು ಆಘಾತವಾಗಿತ್ತು. ಇವರು ತುರ್ತು ಅರ್ಜಿ ವಿಚಾರಣೆಗೆ ಕೇಳಿದರೂ ಸುಪ್ರೀಂ ಕೋರ್ಟ್ ಮಾನ್ಯ ಮಾಡಿರಲಿಲ್ಲ.