ಬೆಳಗಾವಿ: ಕಳೆದ ತಿಂಗಳು ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದ ಮನೆ ಕಳೆದುಕೊಂಡು ಪೋಷಕರೊಂದಿಗೆ ಕಾಳಜಿ ಕೇಂದ್ರದಲ್ಲಿದ್ದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ್ ಗ್ರಾಮದಲ್ಲಿ ನಡೆದಿದೆ.
ದೊಡ್ಡ ಹಂಪಿಹೊಳಿ ಗ್ರಾಮದ ಅಬ್ದುಲ್ ಸಾಬ್(5) ಮೃತಪಟ್ಟ ಬಾಲಕ. ಪ್ರವಾಹಕ್ಕೆ ದೊಡ್ಡ ಹಂಪಿಹೊಳಿ ಗ್ರಾಮದಲ್ಲಿದ್ದ ಅಬ್ದುಲ್ನ ಮನೆ ಬಿದ್ದಿರುವ ಹಿನ್ನೆಲೆಯಲ್ಲಿ ಬಾಲಕನ ಕುಟುಂಬ ಕಳೆದ ಒಂದು ತಿಂಗಳಿಂದ ಎಪಿಎಂಸಿ ಆವರಣದಲ್ಲಿ ಆಶ್ರಯ ಪಡೆದುಕೊಂಡಿತ್ತು. ಇಲ್ಲಿ ಸರಿಯಾದ ಆಹಾರ ಸಿಗುತ್ತಿರಲಿಲ್ಲ. ಅಲ್ಲದೆ ಬಾಲಕನಿಗೆ ಜ್ವರ ಕೂಡ ಬಂದಿತ್ತು. ಆದರೆ ಸರಿಯಾದ ಚಿಕಿತ್ಸೆ ಸಿಗದ ಪರಿಣಾಮ ಜ್ವರ ಹೆಚ್ಚಾಗಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ.
ಈ ಬಗ್ಗೆ ಅಲ್ಲಿನ ತಹಶೀಲ್ದಾರ್ ಮಾತನಾಡಿ ಮಗು ಹಸಿವಿನಿಂದ ಸಾವನ್ನಪ್ಪಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ. ಕಾಳಜಿ ಕೇಂದ್ರಕ್ಕೆ ಸೋಮವಾರ ಸ್ವತಃ ನಾನೇ ಭೇಟಿ ಕೊಟ್ಟಿದ್ದೆ. ರಾತ್ರಿ ಅಲ್ಲಿ ಇದ್ದ ನಿರಾಶ್ರಿತರೆಲ್ಲರೂ ಊಟ ಮಾಡಿದ ಬಳಿಕವೇ ನಾನು ವಾಪಸ್ ಹೋದೆ. ಈ ಬಾಲಕ ಸಾವನ್ನಪ್ಪಿದ್ದು ಹಸಿವಿನಿಂದ ಅಲ್ಲ. ಆತನಿಗೆ ಜ್ವರ ಬಂದಿತ್ತು, ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಯನ್ನೂ ಕೊಡಿಸಿದ್ದೆವು. ಆದರೂ ಜ್ವರ ನಿಯಂತ್ರಣಕ್ಕೆ ಬಾರದೇ, ಹೆಚ್ಚಾಗಿ ನೆತ್ತಿಗೆ ಏರಿದ್ದರಿಂದ ಬಾಲಕ ಸಾವನ್ನಪ್ಪಿದ್ದಾನೆ. ಒಂದು ವೇಳೆ ಕಾಳಜಿ ಕೇಂದ್ರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರೆ, ಜಿಲ್ಲಾಧಿಕಾರಿಗಳಿಗೆ ತಿಳಿಸಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಪ್ರವಾಹ ಉಂಟಾಗಿ ಮನೆಮಠ ಕಳೆದುಕೊಂಡು ಜನರು ಕಳೆದ ಒಂದು ತಿಂಗಳಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಸರ್ಕಾರ ನಿರಾಶ್ರಿತರಿಗೆ ಸರಿಯಾಗಿ ಮನೆಯ ವ್ಯವಸ್ಥೆ ಮಾಡಿಕೊಟ್ಟಿಲ್ಲ, ಜೊತೆಗೆ ಅವರಿಗೆ ಯಾವುದೇ ರೀತಿಯ ಸೌಲಭ್ಯವೂ ದೊರಕುತ್ತಿಲ್ಲ. ಹೀಗಿರುವಾಗ ಸಂತ್ರಸ್ತರು ಬದುಕು ಕಟ್ಟಿಕೊಳ್ಳುವುದು ಹೇಗೆ? ಹೀಗೆ ಹಸಿವು, ಜ್ವರಕ್ಕೆ ಸಂತ್ರಸ್ತರು ಬಲಿಯಾಗುತ್ತಿದ್ದರೆ ಇದಕ್ಕೆಲ್ಲಾ ಯಾರು ಹೊಣೆ? ಪರಿಹಾರ ನೀಡಬೇಕಿದ್ದ ಸರ್ಕಾರ ಯಾಕೆ ಸಂತ್ರಸ್ತರ ನೆರವಿಗೆ ಬರುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಿಎಂ ಯಡಿಯೂರಪ್ಪ ಅವರು ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿದ್ದು, ಇಂದು ಎಪಿಎಂಸಿಯ ಕಾಳಜಿ ಕೇಂದ್ರ ಭೇಟಿ ನೀಡಲಿದ್ದಾರೆ. ಅಲ್ಲದೆ ಕಾಳಜಿ ಕೇಂದ್ರದಲ್ಲಿ ಬಾಲಕನ ಸಾವಿನ ಬಗ್ಗೆ ತಿಳಿದು ಮೃತನ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ.