
ನವದೆಹಲಿ: ಪಾಕಿಸ್ತಾನದ ವಾಯುಪ್ರದೇಶದ ಮೂಲಕ ಐಸ್ಲೆಂಡ್ ತೆರಳಲು ರಾಷ್ಟ್ರಪತಿ ಕೊವಿಂದ್ ಅವರಿಗೆ ಅನುಮತಿ ನೀಡಬೇಕು ಎಂದು ಕೋರಿದ್ದ ಭಾರತದ ಮನವಿಯನ್ನು ತಿರಸ್ಕರಿಸಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಹೇಳಿದ್ದಾರೆ. ಈ ನಿರ್ಧಾರಕ್ಕೆ ಭಾರತದ ಇತ್ತೀಚಿಗಿನ ನಡವಳಿಕೆ ಕಾರಣ ಎಂದು ಖುರೇಶಿ ತಿಳಿಸಿದ್ದಾರೆ.
ರಾಷ್ಟ್ರಪತಿ ಕೋವಿಂದ್ ಅವರು ಸೋಮವಾರದಂದು ಐಸ್ಲ್ಯಾಂಡ್, ಸ್ವಿಟ್ಜರ್ಲೆಂಡ್ ಮತ್ತು ಸ್ಲೊವೇನಿಯಾ ದೇಶಗಳಿಗೆ ಭೇಟಿ ನೀಡಲಿದ್ದಾರೆ, ಈ ಸಂದರ್ಭದಲ್ಲಿ ಅವರು ಗಡಿಯಾಚೆಗಿನ ಭಯೋತ್ಪಾದನೆಯಂತಹ ವಿಷಯಗಳ ಬಗ್ಗೆ ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ. ಖುರೇಷಿ ಅವರ ಪ್ರಕಾರ ದೇಶದ ವಾಯುಪ್ರದೇಶವನ್ನು ಬಳಸಲು ಅಧ್ಯಕ್ಷ ಕೋವಿಂದ್ ಅನುಮತಿಯನ್ನು ನಿರಾಕರಿಸುವ ಅಸಾಮಾನ್ಯ ನಿರ್ಧಾರವನ್ನು ಕಾಶ್ಮೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ನಡೆದ ವೈಮಾನಿಕ ದಾಳಿ ನಂತರ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಭಾರತೀಯ ಸಂಚಾರಕ್ಕೆ ಮುಚ್ಚಿತ್ತು.ಇದರಿಂದಾಗಿ ಇಸ್ಲಾಮಾಬಾದ್ ಮತ್ತು ನವದೆಹಲಿ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿತು. ಆದಾಗ್ಯೂ, ಇದು ಜುಲೈನಲ್ಲಿ ತನ್ನ ವಾಯುಪ್ರದೇಶವನ್ನು ನಾಗರಿಕರ ಸಂಚಾರಕ್ಕೆ ಮತ್ತೆ ತೆರೆಯಿತು.