ಬೆಂಗಳೂರು, ಸೆ.7-ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಅನರ್ಹಗೊಂಡಿರುವ ಜೆಡಿಎಸ್-ಕಾಂಗ್ರೆಸ್ 17 ಮಂದಿ ಅನರ್ಹ ಶಾಸಕರು ಮತ್ತೆ ತಮ್ಮ ಶಾಸಕ ಸ್ಥಾನವನ್ನು ಉಳಿಸಿಕೊಳ್ಳಲು ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
ಸ್ಪೀಕರ್ ರಮೇಶ್ಕುಮಾರ್ ಅವರ ಆದೇಶವನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಆ ಅರ್ಜಿ ವಿಚಾರಣೆಗೆ ಈವರೆಗೂ ಸಮಯ ನಿಗದಿ ಆಗಿಲ್ಲ. ಈಗಾಗಲೇ ಒಂದೂವರೆ ತಿಂಗಳು ಕಳೆದುಹೋಗಿದ್ದು, ಚುನಾವಣಾ ಆಯೋಗ ತೆರವಾದ ಸ್ಥಾನಗಳಿಗೆ ಆರು ತಿಂಗಳೊಳಗಾಗಿ ಚುನಾವಣೆ ನಡೆಸಬೇಕಿದೆ. ಸಮಯದ ಲೆಕ್ಕಾಚಾರ ಹಾಕುವುದಾದರೆ ಇನ್ನೆರಡು ತಿಂಗಳಲ್ಲಿ ಉಪಚುನಾವಣೆಗಳ ದಿನಾಂಕ ನಿಗದಿಯಾಗಬೇಕು. ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಆರಂಭವಾಗದೆ ಇರುವುದರಿಂದ 17 ಮಂದಿ ಅನರ್ಹರು ಆತಂಕಕ್ಕೊಳಗಾಗಿ ಚಡಪಡಿಸುತ್ತಿದ್ದಾರೆ.
ಇತ್ತ ಉಪಚುನಾವಣೆಗಳಲ್ಲಿ ಬಲಿಷ್ಠ ರಣತಂತ್ರ ರೂಪಿಸಿ ಪಕ್ಷ ದ್ರೋಹ ಮಾಡಿದವರನ್ನು ಸೋಲಿಸಲು ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿವೆ.
ಹೀಗಾಗಿ ಉಪಚುನಾವಣೆಗೆ ಅವಕಾಶವೇ ಆಗದಂತೆ ಕಾನೂನಾತ್ಮಕ ಅಂಶಗಳನ್ನು ಬಳಸಿಕೊಂಡು ಸ್ಪೀಕರ್ ರಮೇಶ್ಕುಮಾರ್ ಅವರ ಆದೇಶದ ಪುನರ್ ಪರಿಶೀಲನೆಗೊಳಪಡಿಸುವಂತೆ ಮನವಿ ಮಾಡಲು ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.
ರಮೇಶ್ ಕುಮಾರ್ ಅವರು ತೀರ್ಪು ನೀಡುವ ವೇಳೆ ಹಲವಾರು ನಿಯಮಗಳ ಉಲ್ಲಂಘನೆಯಾಗಿವೆ. ಹಾಗಾಗಿ 17 ಮಂದಿ ಶಾಸಕರ ರಾಜೀನಾಮೆ ಪ್ರಕರಣ ಪುನರ್ ಪರಿಶೀಲನೆ ಅಗತ್ಯವಿದೆ ಎಂದು ಅನರ್ಹ ಶಾಸಕರ ಪರವಾದ ವಕೀಲರು ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಲು ಮುಂದಾಗಿದ್ದಾರೆ.
ಒಂದು ವೇಳೆ ಈ ವಾದ ಪುರಸ್ಕರಿಸಿ ನ್ಯಾಯಾಲಯ ರಾಜೀನಾಮೆ ಪ್ರಕರಣವನ್ನು ಮರು ಪರಿಶೀಲಿಸುವಂತೆ ಸೂಚನೆ ನೀಡಿದರೆ, 17 ಮಂದಿಯ ಶಾಸಕತ್ವವು ಜೀವಂತವಾಗಿ ಉಳಿಯುವ ಸಾಧ್ಯತೆಯಿದೆ. ರಮೇಶ್ಕುಮಾರ್ ನಂತರ ಸ್ಪೀಕರ್ ಹುದ್ದೆ ಅಲಂಕರಿಸಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮರು ವಿಚಾರಣೆ ನಡೆಸಲು ಮುಂದಾದರೆ ಅನರ್ಹರಿಗೆ ಮರುಜೀವ ಬಂದಂತಾಗುತ್ತದೆ.
ರಮೇಶ್ ಕುಮಾರ್ ಅವರ ಆದೇಶವನ್ನು ಎತ್ತಿ ಹಿಡಿಯದೆ ಸುಪ್ರೀಂಕೋರ್ಟ್ ಮರು ವಿಚಾರಣೆಗೆ ಅವಕಾಶ ನೀಡಿದ್ದೇ ಆದರೆ 17 ಮಂದಿ ಶಾಸಕರಾಗಿ ಮುಂದುವರೆಯುತ್ತಾರೆ. ಆ ಸಂದರ್ಭದಲ್ಲಿ ಅವರು ತಮ್ಮ ಮಾತೃ ಪಕ್ಷಕ್ಕೆ ನಿಷ್ಠೆ ತೋರಿಸಬೇಕಾಗುತ್ತದೆ. ಅಂತಹ ಸನ್ನಿವೇಶ ಸೃಷ್ಟಿಯಾದರೆ 104 ಮಂದಿ ಶಾಸಕರನ್ನು ಹೊಂದಿರುವ ಬಿಜೆಪಿ ಬಹುಮತ ಕಳೆದುಕೊಳ್ಳುತ್ತದೆ. ದೋಸ್ತಿ ಪಕ್ಷಗಳ ಸಂಖ್ಯಾಬಲ ಹೆಚ್ಚಾಗುತ್ತದೆ. ಈಗಾಗಲೇ ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಿರುವುದರಿಂದ 6ತಿಂಗಳಿಗಿಂತ ಮೊದಲು ಬಹುಮತ ಸಾಬೀತು ಪಡಿಸುವ ಅಗತ್ಯವಿಲ್ಲ. ಹಾಗಾಗಿ ಸರ್ಕಾರಕ್ಕೆ ಯಾವುದೆ ಅಪಾಯವಿಲ್ಲ ಎಂಬ ವಾದಗಳು ನಡೆಯುತ್ತಿವೆ. 6ತಿಂಗಳವರೆಗೂ ಸರ್ಕಾರ ಮುಂದುವರೆದರೆ ಅಷ್ಟರಲ್ಲಿ ಸ್ಪೀಕರ್ ಕಾಗೇರಿಯವರ ಮುಂದೆ ಮತ್ತೊಮ್ಮೆ ರಾಜೀನಾಮೆ ನೀಡುವುದು, ಅದು ಅಂಗೀಕಾರಗೊಂಡು ಮತ್ತೊಮ್ಮೆ ಉಪಚುನಾವಣೆ ಎದುರಿಸಿ ಗೆದ್ದು ಬರುವುದು ಆವರೆಗೂ ಯಾವುದೇ ಅಡೆತಡೆ ಇಲ್ಲದೆ ಸಚಿವ ಸ್ಥಾನದ ಅಧಿಕಾರ ಅನುಭವಿಸುವುದು ಎಂಬ ಯೋಜನೆ ಸಿದ್ಧಕೊಂಡಿದೆ.
ಒಂದು ವೇಳೆ ರಮೇಶ್ ಕುಮಾರ್ ಅವರ ಆದೇಶವೇ ಊರ್ಜಿತವಾದರೆ, ಅನರ್ಹ ಶಾಸಕರ ರಾಜಕೀಯ ಭವಿಷ್ಯದ ಮುಂದೆ ಸಾಕಷ್ಟು ಸವಾಲುಗಳು ಎದುರಾಗುತ್ತವೆ. 15ನೇ ವಿಧಾನಸಭೆ ಅವಧಿ ಪೂರ್ಣಗೊಳ್ಳುವವರೆಗೂ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಅಧಿಕಾರ ಅನುಭವಿಸುವಂತಿಲ್ಲ. ರಾಜಕೀಯ ಜೀವನವನ್ನು ಪಣಕ್ಕಿಟ್ಟು ಸಾಕಷ್ಟು ರಿಸ್ಕ್ ತೆಗೆದುಕೊಂಡು ಜನಸಾಮಾನ್ಯರ ಟೀಕೆ, ನಿಂದನೆ ಎದುರಿಸಿ ಬಿಜೆಪಿ ಸರ್ಕಾರದ ರಚನೆಗೆ ಕಾರಣರಾಗಿದ್ದರೂ ಅಧಿಕಾರ ಅನುಭವಿಸಲು ಸಾಧ್ಯವಾಗದಿರುವಂತಹ ಮಾನಸಿಕ ಹಿಂಸೆ ಅನರ್ಹರನ್ನು ಕಾಡಲಾರಂಭಿಸುತ್ತದೆ.
ಹೀಗಾಗಿ ಹೇಗಾದರೂ ಮಾಡಿ ಶಾಸಕ ಸ್ಥಾನವನ್ನು ಉಳಿಸಿಕೊಳ್ಳಬೇಕು, ಉಪಚುನಾವಣೆ ಎದುರಾಗದಂತೆ ತಡೆಯಬೇಕು. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಬೇಕೆಂದು ತೆರೆಮೆರೆಯಲ್ಲಿ ಅನರ್ಹ ಶಾಸಕರು ಮತ್ತು ಅವರ ಬೆಂಬಲಿಗರು ಸಾಕಷ್ಟು ಕಸರತ್ತುಗಳನ್ನು ನಡೆಸುತ್ತಿದ್ದಾರೆ.