ಬೆಂಗಳೂರು,ಸೆ.6- ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನದ ಬಗ್ಗೆ ಬಿಜೆಪಿಯ ಸಚಿವರು, ಶಾಸಕರು ತಲೆಗೊಬ್ಬರಂತೆ ಹೇಳಿಕೆಗಳನ್ನು ನೀಡುತ್ತಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಈ ವಿಷಯವಾಗಿ ಮೃದು ಧೋರಣೆ ತಳೆದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿಯ ಸಚಿವರು, ಶಾಸಕರು ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು, ಮಾಡಿದ್ದುಣ್ಣೋ ಮಾರಾಯ ಎಂದೆಲ್ಲ ಹೇಳಿಕೆ ನೀಡಿರುವಾಗ ದಿಕೆಶಿ ಬಂಧನದಿಂದ ನನಗೆ ಸಂತೊಷವಾಗಿಲ್ಲ, ಅವರು ಆದಷ್ಟು ಬೇಗ ಹೊರಬರುವಂತಾಗಲಿ ಎಂದು ಯಡಿಯೂರಪ್ಪ ಹೇಳಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರ ಇರುವುದು ಸ್ಪಷ್ಟ.
ಕೇವಲ ಯಡಿಯೂರಪ್ಪ ಮಾತ್ರವಲ್ಲ ಅವರ ಪುತ್ರ, ಸಂಸದ ರಾಘವೇಂದ್ರ ಸಹ ಹೇಳಿಕೆ ನೀಡಿದ್ದು ಶಿವಕುಮಾರ್ ಕಾನೂನು ಹೋರಾಟದಲ್ಲಿ ಯಶಸ್ವಿಯಾಗಿ ಹೊರಬರಲಿ ಎಂದು ಹಾರೈಸಿದ್ದಾರೆ. ರಾಜ್ಯ ರಾಜಕೀಯವನ್ನು ಅವಲೋಕಿಸಿದರೆ ಬಿಎಸ್ವೈ ನಡೆಗೆ ಕಾರಣ ನಿಗೂಢವೇನಲ್ಲ.
ಕುಮಾರಸ್ವಾಮಿ ನೇತೃತ್ವದ ಸರಕಾರ ಕೆಡವಿ ಅಧಿಕಾರಕ್ಕೆ ಬರುವ ಮೂಲಕ ಎಲ್ಲೋ ಒಂದು ಕಡೆ ಒಕ್ಕಲಿಗ ಮತದಾರರ ಮನದಲ್ಲಿ ಮೂಡಿರುವ ಅಸಮಾಧಾನ ಡಿಕೆಶಿ ಬಂಧನದ ಹಿನ್ನೆಲೆಯಲ್ಲಿ ಗಟ್ಟಿಗೊಂಡು ತನ್ನ ಬುಡಕ್ಕೆ ಬಾರದಿರಲಿ ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿಯೇ ಬಿಎಸ್ವೈ ಈ ನಿಲುವು ತಳೆದಿದ್ದಾರೆ ಎನ್ನಲಾಗಿದೆ.
ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಬಿಜೆಪಿ ಪಾರುಪತ್ಯವಿದ್ದರೂ ಹಳೆ ಮೈಸೂರು ಪ್ರದೇಶದಲ್ಲಿ ಬಿಜೆಪಿಗೆ ಇನ್ನೂ ಗಟ್ಟಿ ನೆಲೆ ಇಲ್ಲ. ಈ ಪ್ರದೇಶದಲ್ಲಿ ಹೆಚ್ಚಾಗಿ ಒಕ್ಕಲಿಗ ಮತದಾರರು ಇರುವ ಹಿನ್ನೆಲೆಯಲ್ಲಿ ಅವರ ಕೋಪ ಕಟ್ಟಿಕೊಳ್ಳುವುದು ತರವಲ್ಲ ಎಂದೇ ಯಡಿಯೂರಪ್ಪ ಅವರು ಡಿಕೆಶಿ ವಿಷಯವಾಗಿ ಮೃದು ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಯಾವ ಜಿಲ್ಲೆಗಳಲ್ಲಿ ಅಥವಾ ಕ್ಷೇತ್ರಗಳಲ್ಲಿ ಒಕ್ಕಲಿಗರ ಸಮುದಾಯದ ಮತಗಳು ಪ್ರಮುಖ ಪಾತ್ರ ವಹಿಸುತ್ತವೋ ಅಲ್ಲೆಲ್ಲ ಬಿಜೆಪಿಗೆ ಮುಂದಿನ ಚುನಾವಣೆಗಳು ಬಹಳ ಕಷ್ಟ ಆಗಲಿವೆ ಎಂದು ಈಗಾಗಲೇ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಚಾಲ್ತಿಗೆ ಬಂದಿದೆ. ಪ್ರಮುಖವಾಗಿ ಮೂರು ವಿಚಾರಗಳು ಈಗಿನ ಪರಿಸ್ಥಿತಿಯಲ್ಲಿ ಮುನ್ನೆಲೆಗೆ ಬಂದು, ಅದು ಕೇಂದ್ರದಲ್ಲಿರುವ ಬಿಜೆಪಿ ವಿರುದ್ಧ ಸಿಟ್ಟಾಗಿ ಪರಿವರ್ತನೆಯಾಗುತ್ತಿದೆ ಎಂಬ ಆತಂಕ ಎದುರಾಗಿದೆ.
ಮೊದಲನೆಯದು, ಎಚ್. ಡಿ. ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್- ಕಾಂಗ್ರೆಸ್ ಸರಕಾರವನ್ನು ಕೆಡವಿದ್ದು. ಎರಡನೆಯದು, ಕೆಫೆ ಕಾಫಿ ಡೇ ಸಿದ್ಧಾರ್ಥ್ ಸಾವಿಗೆ ಆದಾಯ ತೆರಿಗೆ ಇಲಾಖೆಯ ಕಿರುಕುಳ-ಪರೋಕ್ಷವಾಗಿ ಕೇಂದ್ರ ಸರಕಾರದ ಕಾನೂನುಗಳು ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಇಂದಿಗೂ ಚರ್ಚೆಯಾಗುತ್ತಿದೆ.
ಇವುಗಳ ಜತೆಗೆ, ಇದೀಗ ಜೆಡಿಎಸ್ ನ ದೇವೇಗೌಡರು- ಕುಮಾರಸ್ವಾಮಿ ಇವರಿಬ್ಬರನ್ನು ಹೊರತುಪಡಿಸಿದರೆ ಸಮುದಾಯದಲ್ಲಿ ಪ್ರಮುಖ ನಾಯಕ ಎನಿಸಿಕೊಂಡಿರುವ ಡಿ. ಕೆ. ಶಿವಕುಮಾರ್ ಬಂಧನದ ಮೂಲಕ ಒಕ್ಕಲಿಗ ಸಮುದಾಯದ ಪ್ರಭಾವಿಗಳನ್ನು ತುಳಿಯುವ ಕೆಲಸ ಶುರುವಾಗಿದೆ ಎಂಬ ಭಾವನೆ ಬೇರೂರುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗರ ಪ್ರಾಬಲ್ಯವಿರುವ ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಬೆಂಗಳೂರು ಉತ್ತರ, ತುಮಕೂರು ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅನಾಯಾಸವಾಗಿ ಗೆದ್ದಿದ್ದಾರೆ.
ಅಂದು ಪ್ರಧಾನಿ ನರೇಂದ್ರ ಮೋದಿ ಅಲೆ ಹಾಗೂ ರಾಷ್ಟ್ರೀಯ ವಿಷಯಗಳೇ ಹೆಚ್ಚು ಪ್ರಾಮುಖ್ಯತೆ ಪಡೆದಿದ್ದರಿಂದ ಬಿಜೆಪಿ ನಿರೀಕ್ಷೆಗೂ ಮೀರಿದ ಗೆಲುವು ಸಾಧಿಸಿತ್ತು. ಆದರೆ ಮುಂಬರುವ ಉಪಚುನಾವಣೆ ಹಾಗೂ ವಿಧಾನಸಭೆ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಾತಿ ಆಧಾರಿತ ಚುನಾವಣೆ ನಡೆಯುವುದರಿಂದ ಡಿಕೆಶಿ ಬಂಧನದ ಪ್ರಕರಣ ಬಿಜೆಪಿಗೆ ತಿರುಗುಬಾಣವಾಗಲಿದೆಯೇ ಎಂಬ ಚರ್ಚೆ ಆರಂಭವಾಗಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಸೇರಿ ವಿವಿಧ ಜಿಲ್ಲೆ ಹಾಗೂ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯದ ಮತಗಳು ಪ್ರಮುಖವಾಗಿವೆ. ಸಾಂಪ್ರದಾಯಿಕವಾಗಿ ಕರ್ನಾಟಕದಲ್ಲಿ ಲಿಂಗಾಯತರು ಬಿಜೆಪಿ ಜತೆಗೂ ಒಕ್ಕಲಿಗರು ಜೆಡಿಎಸ್ ಹಾಗೂ ಅಲ್ಪ ಪ್ರಮಾಣದಲ್ಲಿ ಕಾಂಗ್ರೆಸ್ ಜತೆಗೂ ನಿಂತಿದ್ದರು.
ಆದರೆ 2014ರ ನಂತರದ ದಿನಗಳಲ್ಲಿ ಒಕ್ಕಲಿಗರ ಯುವ ಮನಸ್ಸುಗಳು ಬಿಜೆಪಿ ಕಡೆಗೆ ವಾಲಿದ್ದವು. ಆದರೆ ಸಿದ್ಧಾರ್ಥ್ ಸಾವಿನ ನಂತರ ಈ ಮನಸ್ಥಿತಿಯಲ್ಲಿ ಬದಲಾವಣೆಗಳು ಕಾಣಿಸುತ್ತಿವೆ. ಡಿ. ಕೆ. ಶಿವಕುಮಾರ್ ಬಂಧನ ನಂತರ ಅದು ಇನ್ನಷ್ಟು ಗಟ್ಟಿಯಾದಂತೆ ಕಾಣಿಸುತ್ತಿದೆ.
ಆದರೆ ಒಕ್ಕಲಿಗ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟುಕೊಂಡೇ ಬಿಜೆಪಿ ಡಾ. ಸಿ.ಎನ್.ಅಶ್ವಥ್ ನಾರಾಯಣ್ರನ್ನು ಉಪ ಮುಖ್ಯಮಂತ್ರಿ ಮಾಡಲಾಗಿದೆ. ಆದರೆ ಇದು ಬೆಂಗಳೂರು ಆಚೆಗೆ ದೊಡ್ಡ ಮಟ್ಟದ ಪ್ರಭಾವ ಬೀರುವ ಕೆಲಸ ಮಾಡುವಂತೆ ಕಾಣಿಸುತ್ತಿಲ್ಲ. ಇನ್ನು ಆರ್. ಅಶೋಕ್ ಪ್ರಭಾವ ಪಕ್ಷದೊಳಗೆ ಸ್ವಲ್ಪ ಕಡಿಮೆ ಎಂದುಕೊಂಡರೂ ಮೂಲೆಗುಂಪೇನೂ ಮಾಡಿಲ್ಲ. ಕೇಸರಿ ಪಾಳಯದಲ್ಲಿ ಇರುವ ಒಕ್ಕಲಿಗ ಸಮಾಜದ ಉಳಿದ ನಾಯಕರಿಗೆ ದೊಡ್ಡ ಮಟ್ಟದಲ್ಲಿ ಮತ ಸೆಳೆಯುವ ಶಕ್ತಿ ಇಲ್ಲ.