![](http://kannada.vartamitra.com/wp-content/uploads/2019/09/yedyurappa_6778-508x381.jpg)
ಬೆಂಗಳೂರು,ಸೆ.7- ಮಹಾನಗರದ ಜನತೆ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪನವರೇ ಫೀಲ್ಡ್ಗೆ ಇಳಿಯಲಿದ್ದಾರೆ.
ಮುಂದಿನ ವಾರದಿಂದ ನಗರ ಪ್ರದಕ್ಷಿಣೆ ಮಾಡಲಿರುವ ಯಡಿಯೂರಪ್ಪನವರು ಕಸದ ಸಮಸ್ಯೆ, ರಾಜಕಾಲುವೆಗಳ ಒತ್ತುವರಿ, ಚರಂಡಿಗಳ ದುರವಸ್ಥೆ, ಹೂಳೆತ್ತುವುದು ಸೇರಿದಂತೆ ಮತ್ತಿತರ ಸಮಸ್ಯೆಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸುವರು.
ಮುಂದಿನ ಭಾನುವಾರ ಇಡೀ ದಿನ ನಗರ ಪ್ರದಕ್ಷಿಣೆ ಮಾಡಲಿರುವ ಸಿಎಂ, ಬಿಬಿಎಂಪಿ, ಬಿಡಿಎ, ಬಿಎಂಆರ್ಡಿಎ ವತಿಯಿಂದ ಕೈಗೊಂಡಿರುವ ಕಾಮಗಾರಿಗಳ ಸ್ಥಿತಿಗತಿ, ಹೊಸ ಯೋಜನೆಗಳ ಅನುಷ್ಠಾನ, ರಸ್ತೆಗಳ ಅಗಲೀಕರಣ, ಸಂಚಾರ ದಟ್ಟಣೆ ನಿವಾರಿಸುವುದು ಸೇರಿದಂತೆ ಕಾಮಗಾರಿಗಳನ್ನು ಪರಿಶೀಲನೆ ನಡೆಸಲಿದ್ದಾರೆ.
ಗಾಗಲೇ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ, ಕಂದಾಯ ಸಚಿವ ಆರ್.ಅಶೋಕ್, ಬಿಬಿಎಂಪಿ ಮೇಯರ್ ಗಂಗಾಂಬಿಕೆ, ಉಪಮೇಯರ್ ಭದ್ರೇಗೌಡ, ಬಿಬಿಎಂಪಿ ಆಯುಕ್ತರು, ಬಿಡಿಎ ಆಯುಕ್ತರು, ಬಿಎಂಆರ್ಡಿಎ ವ್ಯವಸ್ಥಾಪಕ ನಿರ್ದೇಶಕರು, ಬಿಡಬ್ಲ್ಯುಎಸ್ಎಸ್ಬಿ ಅಧ್ಯಕ್ಷರು, ಆಯುಕ್ತರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಖುದ್ದು ಹಾಜರಿರಬೇಕೆಂದು ಸೂಚನೆ ಕೊಟ್ಟಿದ್ದಾರೆ.
ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿರುವ ಮುಖ್ಯಮಂತ್ರಿಗಳ ನಗರ ಪ್ರದಕ್ಷಿಣೆ ಸಂಜೆಯವರೆಗೂ ನಡೆಯಲಿದೆ. ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ಕೈಗೆತ್ತಿಕೊಂಡಿರುವ ಯೋಜನೆಗಳ ಕಾಮಗಾರಿಯನ್ನು ಪರಿಶೀಲನೆ ಮಾಡುವರು.
ಫ್ಲೈಓವರ್ ನಿರ್ಮಾಣ, ಸ್ಕೈವಾಕ್, ವೈಟ್ಟಾಪಿಂಗ್, ರಸ್ತೆ ಅಗಲೀಕರಣ, ರಾಜಕಾಲುವೆಯಲ್ಲಿ ಹೂಳೆತ್ತಿರುವುದು, ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳ ನಿರ್ಮಾಣ ಮಾಡಿರುವವರ ಮೇಲೆ ಕಾನೂನು ಕ್ರಮ ಜರುಗಿಸುವುದು ಸೇರಿದಂತೆ ನಗರಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಅಧಿಕಾರಿಗಳಿಂದ ಮಾಹಿತಿ ಪಡೆಯುವರು.
ಮೆಟ್ರೊ 2ನೇ ಹಂತದ ಕಾಮಗಾರಿಯನ್ನು ವೀಕ್ಷಣೆ ಮಾಡಲಿರುವ ಯಡಿಯೂರಪ್ಪ ಅಗತ್ಯವಿರುವ ಕಡೆ ರಸ್ತೆಗಳ ಅಗಲೀಕರಣ ಹಾಗೂ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವವ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಲಿದ್ದಾರೆ.
ಗುತ್ತಿಗೆದಾರರಿಗೆ ತರಾಟೆ: ಇನ್ನು ಬಿಬಿಎಂಪಿ, ಬಿಡಿಎ ವತಿಯಿಂದ ಗುತ್ತಿಗೆದಾರರು ಕೈಗೊಂಡಿರುವ ಕಾಮಗಾರಿಗಳನ್ನು ವೀಕ್ಷಿಸಿ ನಿಗದಿತ ಅವಧಿಯೊಳಗೆ ಮುಗಿಸದಿದ್ದರೆ ಗುತ್ತಿಗೆಯನ್ನು ರದ್ದುಪಡಿಸುವ ಎಚ್ಚರಿಕೆ ನೀಡಿದ್ದಾರೆ.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಕಾಲ ಮಿತಿಯೊಳಗೆ ಮುಗಿಸಬೇಕು, ಸಬೂಬು ಹೇಳಿ ವಿಳಂಬ ಮಾಡಿದರೆ ಅಂಥ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡುವ ಎಚ್ಚರಿಕೆ ನೀಡಲಿದ್ದಾರೆ.
ನಗರದಲ್ಲಿ ಪದೇ ಪದೇ ಉಲ್ಬಣಿಸುತ್ತಿರುವ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು. ಗುತ್ತಿಗೆದಾರರ ನಡುವಿನ ಸಮಸ್ಯೆಯಿಂದಾಗಿ ನಗರದ ಜನತೆಗೆ ತೊಂದರೆ ಕೊಡಬಾರದು. ಆಯಾ ದಿನವೇ ಕಸವನ್ನು ವಿಲೇವಾರಿ ಮಾಡಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಬೇಕು.
ಮುಂದೆ ಕಸದ ಸಮಸ್ಯೆ ಕಂಡುಬಂದರೆ ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡುವ ಎಚ್ಚರಿಕೆಯನ್ನು ಸಹ ನೀಡುವ ಸಂಭವವಿದೆ.
ಮುಖ್ಯಮಂತ್ರಿಗಳು ನಗರ ಪ್ರದಕ್ಷಿಣೆ ಮಾಡಲಿದ್ದಾರೆ ಎಂಬ ಸುಳಿವು ಅರಿತಿರುವ ಅಧಿಕಾರಿಗಳು ಈಗಾಗಲೇ ಕೆಲವು ಕಡೆ ಸುಣ್ಣಬಣ್ಣ ಹೊಡೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.