ಬೆಂಗಳೂರು, ಸೆ.6- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮಂಡ್ಯ ಜಿಲ್ಲೆಯ ಪಾಂಡವಪುರ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಶ್, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕರಾದ ಸುರೇಶ್ ಗೌಡ, ಡಾ.ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ಶ್ರೀನಿವಾಸ್ ಸೇರಿದಂತೆ ಜಿಲ್ಲಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.
ಮುಖ್ಯವಾಗಿ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿರುವ ಮೈಶುಗರ್ ಕಂಪನಿಯನ್ನು ಪುನರ್ ನವೀಕರಣಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಸಿಎಂ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಅಧಿಕಾರಿಗಳು ಕಂಪನಿಯ ಈಗಿನ ಸ್ಥಿತಿಗತಿ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿದರು.
ಕಬ್ಬು ನುರಿಯುವ ಸಾಮಥ್ರ್ಯವನ್ನು 5000 ಹೆಚ್ಚಿಸಬೇಕು. ಟಿಸಿಡಿ ಬಾಯ್ಲಿಂಗ್ ಹೌಸ್ ರಿಪೇರಿ ಮಾಡಿಸಬೇಕು, ಕೊನ್ನಳ್ಳಿ ಕೆರೆ ವಾಟರ್ ಲಯನ್ ಸ್ವಚ್ಚಗೊಳ ಕೆಲಸ ಮತ್ತು ಹೆಬ್ಬಾಳ ನೀರಿನ ಮಾರ್ಗವನ್ನು ಸರಿಪಡಿಸಬೇಕಾಗಿದೆ, ವಿದ್ಯುತ್ ಉತ್ಪಾದನೆ ಸಾಮಥ್ರ್ಯವನ್ನು ಹೆಚ್ಚಿಸಬೇಕಿದೆ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ರೈತರ ಕಬ್ಬು ಬೆಳೆಗೆ ಕಬ್ಬು ಅರೆಯುವುದಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ, ನೌಕರರಿಗೂ ತೊಂದರೆಯಾಗಬಾರದು. ಹಾಗಾಗಿ ಸಕ್ಕರೆ ಕಾರ್ಖಾನೆಗಳಿಗೆ, ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪರಿಹಾರವನ್ನು ಕಂಡುಕೊಳ್ಳುವಂತೆ ಸಲಹೆ ಮಾಡಿದರು.
ಕಾರ್ಖಾನೆಗಳು ಮಾತ್ರ ಯಾವುದೇ ಕಾರಣಕ್ಕೂ ನಿಲ್ಲಬಾರದು. ಕಾರ್ಖಾನೆಗಳು ಸಹ ಲಾಭಕ್ಕೆ ಮರಳಬೇಕು, ರೈತರಿಗೂ ಒಳ್ಳೆಯ ಆದಾಯ ಬರುವ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇದಕ್ಕೆ ಪ್ರತಿಕ್ರಿಸಿದ ಸಂಸದೆ ಸುಮಲತಾ ಮತ್ತು ಪುಟ್ಟರಾಜು, ಮಂಡ್ಯ ಸಕ್ಕರೆ ಕಾರ್ಖಾನೆಗಳಿಗೆ ಹೆಚ್ಚಿನ ಅನುದಾನ ನೀಡಿದರೆ ಅನುಕೂಲ ಆಗುತ್ತೆ ಅಂತ ಮನವಿ ಮಾಡಿದರು.
ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಬಿಎಸ್ವೈ, ಹಣಕಾಸಿನ ಸ್ಥಿತಿಗತಿ ನೋಡಿಕೊಂಡು ಆರ್ಥಿಕ ನೆರವು ನೀಡುತ್ತೇನೆ. ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.