
ನವದೆಹಲಿ, ಸೆ.6-ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಆರೋಪಿಯಾಗಿರುವ ಬಹು ಕೋಟಿ ರೂ.ಗಳ ಏರ್ಸೆಲ್ ಮ್ಯಾಕ್ಸಿಸ್ ಹಗರಣದ ವಿಚಾರಣೆಯನ್ನು ದೆಹಲಿಯ ನ್ಯಾಯಾಲಯವೊಂದು ಅನಿರ್ದಿಷ್ಟ ಅವಧಿಗೆ ಮುಂದೂಡಿದೆ.
ಈ ಪ್ರಕರಣದ ತನಿಖೆ ಪೂರ್ಣಗೊಂಡ ನಂತರ ಪ್ರಾಸಿಕ್ಯೂಷನ್ ಕೋರಿಕೆ ಸಲ್ಲಿಸಿದಾಗ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ವಿಶೇಷ ನ್ಯಾಯಾಲಯದ ನ್ಯಾ.ಒ.ಪಿ.ಸೈನಿ ತಿಳಿಸಿದ್ದಾರೆ.
ಈ ತನಿಖೆಯನ್ನು ಪೂರ್ಣಗೊಳಿಸಲು ಮತ್ತಷ್ಟು ಕಾಲಾವಕಾಶದ ಅಗತ್ಯವಿದೆ ಎಂದು ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಇಡಿ ಕೆಲವು ಬಾರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ಒ.ಪಿ.ಸೈನಿ ಯಾವುದೇ ದಿನಾಂಕ ನಿಗದಿಗೊಳಿಸದೆ ಅನಿರ್ದಿಷ್ಟಾವಧಿಗೆ ಮುಂದೂಡಿದೆ.
ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಇಡಿ ಈ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಬೇಕು. ನಂತರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರೆ ವಿಚಾರಣೆಯ ಮುಂದಿನ ದಿನಾಂಕವನ್ನು ನಿಗದಿಗೊಳಿಸಲಾಗುತ್ತದೆ ಎಂಬುದನ್ನು ತಿಳಿಸಿದರು.