ನವದೆಹಲಿ, ಸೆ.6- ಭಾರತೀಯ ವಾಯು ಪಡೆ (ಐಎಎಫ್) ಗೆ ಮತ್ತಷ್ಟು ಬಲ ತುಂಬಲು ಕೇಂದ್ರ ಸರ್ಕಾರ 5000 ಕೋಟಿ ರೂ.ಗಳ ವೆಚ್ಚದ ಆಕಾಶ್ ಕ್ಷಿಪಣಿ ಯೋಜನೆಗೆ ಹಸಿರು ನಿಶಾನೆ ತೋರಿದೆ.
ವೈರಿಗಳ ಫೈಟರ್ ಜೆಟ್ಗಳನ್ನು ಕ್ಷಣಾರ್ಥದಲ್ಲೇ ಹೊಡೆದುರುಳಿಸುವ ಅಗಾಧ ಸಾಮಥ್ರ್ಯದ ದೇಶೀಯ ತಯಾರಿಕೆಯ ಆಕಾಶ್ ವಾಯು ರಕ್ಷಣಾ ವ್ಯವಸ್ಥೆಯ ಆರು ಕ್ಷಿಪಣಿಗಳನ್ನು ಐಎಎಫ್ ಹೊಂದಲಿದೆ. ಇದರಿಂದಾಗಿ ಭಾರತೀಯ ವಾಯು ಪಡೆಯ ಫೈರ್ ಪವರ್ ಮತ್ತಷ್ಟು ಹೆಚ್ಚಾಗಲಿದೆ.
ಈ ಕ್ಷಿಪಣಿಗಳನ್ನು ಪಾಕಿಸ್ತಾನ ಮತ್ತು ಚೀನಾದ ಗಡಿಯಲ್ಲಿ ನಿಯೋಜಿಸಲಾಗುತ್ತದೆ. ವೈರಿಗಳ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಭೂಮಿಯಿಂದಲೇ ಹೊಡೆದುರುಳಿಸುವ ತಾಕತ್ತು ಆಕಾಶ್ ಕ್ಷಿಪಣಿಗಳಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆ ಕುರಿತು ಕಂಪುಟ ಸಮಿತಿ 5000 ಕೋಟಿ ರೂ. ವೆಚ್ಚದ ಆಕಾಶ್ ಕ್ಷಿಪಣಿ ಯೋಜನೆಗೆ ಅನುಮೋದನೆ ನೀಡಿದೆ ಎಂದು ರಕ್ಷಣಾ ಸಚಿವಾಲಯದ ಅತ್ಯುನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.