ನಸ್ಸಾವು, ಸೆ.6-ಬಹಮಾಸ್ ದ್ವೀಪದ ಮೇಲೆ ಬಂದೆರಗಿದ ಬಹಮಾಸ್ ವಿನಾಶಕಾರಿ ಡೋರಿಯನ್ ಚಂಡಮಾರುತದ ಆರ್ಭಟಕ್ಕೆ ಬಲಿಯಾದವರ ಸಂಖ್ಯೆ 30ಕ್ಕೇರಿದೆ. ಈ ಪ್ರಕೃತಿ ವಿಕೋಪದಲ್ಲಿ 70,000ಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ.
ಚಂಡಮಾರುತ ಪ್ರಕೋಪದಿಂದ ಸಾವು-ನೋವು ಹಾಗೂ ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ಪ್ರಧಾನಮಂತ್ರಿ ಹುಬರ್ಟ್ ಮಿನ್ನಿಸ್ ಮಾಹಿತಿ ನೀಡಿದ್ಧಾರೆ.
ಚಂಡಮಾರುತದ ರೌದ್ರಾವತಾರದಿಂದ ಕೆಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಇದೊಂದು ವಿನಾಶಕಾರಿ ಪ್ರಕೃತಿ ವಿಕೋಪ ಎಂದು ಪ್ರಧಾನಿ ವಿಷಾದದಿಂದ ಹೇಳಿದ್ಧಾರೆ.
ಬಹಮಾಸ್ ದ್ವೀಪ ಪ್ರದೇಶಗಳಲ್ಲಿ ಡೋರಿಯನ್ ಸಮುದ್ರ ಸುಂಟರಗಾಳಿ ಆರ್ಭಟದಿಂದ ಸಂತ್ರಸ್ತರಾಗಿರುವ 70,000ಕ್ಕೂ ಹೆಚ್ಚು ಜನರಿಗೆ ತುರ್ತು ಅಗತ್ಯವಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಡೋರಿಯನ್ ಕ್ಯಾಟಗೇರಿ-2 ತೀವ್ರತೆಯ ಚಂಡಮಾರುತ ಗುರುವಾರ ರಾತ್ರಿ ಅಮೆರಿಕದ ಉತ್ತರ ಮತ್ತು ದಕ್ಷಿಣ ಕರೋಲಿನಾ ಮೇಲೆ ಅಪ್ಪಳಿಸಿ ಭಾರೀ ಅನಾಹುತ ಸೃಷ್ಟಿಸಿದೆ.