ಭಾರತದ ಕ್ರಮವನ್ನು ಸ್ವಾಗತಿಸಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಅಮೆರಿಕ

ವಾಷಿಂಗ್ಟನ್, ಸೆ.5- ಮೌಲಾನ ಮಸೂದ್ ಅಜರ್, ಹಫೀಜ್ ಸಯ್ಯದ್, ಝಾಖಿ- ಉರ್ -ರೆಹಮಾನ್ ಲಖ್ವಿ ಮತ್ತು ದಾವೂದ್ ಇಬ್ರಾಹಿಂ ಇವರನ್ನು ಕುಖ್ಯಾತ ಭಯೋತ್ಪಾದಕರೆಂದು ಘೋಷಿಸಿರುವ ಭಾರತದ ಕ್ರಮವನ್ನು ಅಮೆರಿಕ ಸ್ವಾಗತಿಸಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ಭಯೋತ್ಪಾದನೆ, ಉಗ್ರಬಣಗಳು ಮತ್ತು ಉಗ್ರರ ವಿರುದ್ಧ ಭಾರತದ ಹೋರಾಟಕ್ಕೆ ಅಮೆರಿಕ ಸದಾ ಬೆಂಬಲ ಮತ್ತು ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಅಮೆರಿಕ ಪುನರುಚ್ಚಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಉಸ್ತುವಾರಿ ಸಹಕಾರ್ಯದರ್ಶಿ ಅಲೈಸ್ ಜಿ ವೇಲ್ಸ್ , ಕುಖ್ಯಾತ ಕ್ರಿಮಿನಗಳಾದ ಈ ನಾಲ್ವರನ್ನು ಕುಪ್ರಸಿದ್ದ ಭಯೋತ್ಪಾದಕರೆಂದು ಭಾರತ ಘೋಷಿಸಿರುವುದು ಸ್ವಾಗತಾರ್ಹ. ಇದಕ್ಕೆ ಅಮೆರಿಕದ ಸಂಪೂರ್ಣ ಸಹಮತವಿದೆ ಎಂದು ತಿಳಿಸಿದ್ದಾರೆ.

ಕಾನೂನು ಬಾಹಿರಚಟುವಟಿಕೆಗಳ(ನಿಯಂತ್ರಣ) ಕಾಯ್ದೆ 1967 ತಿದ್ದುಪಡಿ ಅಧಿನಿಯಮಕ್ಕೆ ಕೇಂದ್ರ ಸರ್ಕಾರ ಕಳೆದ ತಿಂಗಳಷ್ಟೇ ಸಂಸತ್‍ನಲ್ಲಿ ಅನುಮೋದನೆ ಪಡೆದಿತ್ತು. ಈ ಕಾಯ್ದೆ ಅನ್ವಯ ಅಜರ್, ಹಫೀಜ್, ಲಖ್ವಿ ಹಾಗೂ ದಾವೂದ್‍ರನ್ನು ಕುಖ್ಯಾತ ಭಯೋತ್ಪಾದಕರೆಂದು ನಿನ್ನೆ ಘೋಷಿಸಲಾಗಿದೆ.

ಅಮೆರಿಕವಲ್ಲದೆ ಭಾರತದ ಮಿತ್ರ ರಾಷ್ಟ್ರಗಳಾದ ರಷ್ಯಾ, ಫ್ರಾನ್ಸ್, ಇಂಗ್ಲೆಂಡ್, ಜಪಾನ್ ಮೊದಲಾದ ರಾಷ್ಟ್ರಗಳು ಸಹ ಈ ಕ್ರಮವನ್ನು ಸ್ವಾಗತಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ