ಭಾರತ ಆಕ್ರಮಣಶೀಲ ಮನೋಭಾವ ತೋರಲ್ಲ, ದಾಳಿ ಮಾಡಿದರೆ ಸುಮ್ಮನೆ ಕೂರಲ್ಲ: ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಎಚ್ಚರಿಕೆ

ಸಿಯೋಲ್​: ಭಾರತದ ಇತಿಹಾಸವನ್ನು ಅವಲೋಕಿಸಿದರೆ ಅದು ಎಂದಿಗೂ ಆಕ್ರಮಣಕಾರಿ ಮನೋಭಾವ ತೋರಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಾಗೆಂದು, ನಮ್ಮ ಮೇಲೆ ಯಾರಾದರೂ ದಂಡೆತ್ತಿ ಬಂದರೆ ಪ್ರತೀದಾಳಿ ನಡೆಸಲು ಹಿಂದೆಮುಂದೆ ಆಲೋಚಿಸುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹೇಳಿದ್ದಾರೆ.

ದಕ್ಷಿಣ ಕೊರಿಯಾದ ಸಿಯೋಲ್​ನಲ್ಲಿ ಆಯೋಜನೆಗೊಂಡಿರುವ ಸಿಯೋಲ್​ ರಕ್ಷಣಾ ಸಮಾಲೋಚನೆ (ಸಿಯೋಲ್​ ಡಿಫೆನ್ಸ್​ ಡೈಲಾಗ್​) ಎಂಬ ವಿಶೇಷ ಅಧಿವೇಶನದಲ್ಲಿ ಅವರು ಮಾತನಾಡಿದರು. ಭಾರತ ಯಾರ ಮೇಲೂ ಬಲಪ್ರಯೋಗಿಸಿದ ಉದಾಹರಣೆ ಅದರ ಇತಿಹಾಸದಲ್ಲಿ ಸಿಗುವುದಿಲ್ಲ. ಹಾಗೆಂದು ಯಾರಾದರೂ ಬಲಪ್ರಯೋಗಿಸಲು ಮುಂದಾದರೆ ತನ್ನ ಬಲವನ್ನು ಬಳಸಿಕೊಳ್ಳುವುದರಲ್ಲಿ ಅದು ಹಿಂದೆ ಬೀಳುವುದಿಲ್ಲ ಎಂದರು.

ರಕ್ಷಣಾ ರಾಜತಾಂತ್ರಿಕತೆ, ಭಾರತದ ಪ್ರಮುಖವಾದ ವ್ಯೂಹಾತ್ಮಕ ಸಾಧನ ಎಂಬುದನ್ನು ಪ್ರತಿಪಾದಿಸುವ ಉದ್ದೇಶದಿಂದ ಜಾಗತಿಕವಾಗಿ ರಕ್ಷಣೆ ಮತ್ತು ಭದ್ರತಾ ಸಹಕಾರ ಹೆಚ್ಚಿಸಿಕೊಳ್ಳುವ ಗುರಿಯೊಂದಿಗೆ ರಾಜನಾಥ್​ ಸಿಂಗ್​ ಈ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಭಾರತದ ನೆರೆಹೊರೆಯವರು ಮೊದಲು ಎಂಬ ನೀತಿಯನ್ನು ಪ್ರಸ್ತಾಪಿಸಿದ ಅವರು, ಹಿಂದೂ ಮಹಾಸಾಗರ ರಿಮ್​ ಸಂಘಟನೆ (ಇಂಡಿಯನ್​ ಓಷನ್​ ರಿಮ್​ ಅಸೋಸಿಯೇಷನ್​-ಐಒಆರ್​ಎ) ಮತ್ತು ಬಂಗಾಳ ಕೊಲ್ಲಿಯಲ್ಲಿ ಬಹು ವಲಯದ ತಾಂತ್ರಿಕ ಮತ್ತು ಆರ್ಥಿಕ ಸಹಕಾರ (ಬಿಮ್​ಸ್ಟೆಕ್​) ಅಲ್ಲದೆ ಸಮುದ್ರ ಮಾರ್ಗದಲ್ಲಿ ಹೆಚ್ಚಿನ ಭದ್ರತೆಗಾಗಿ ಶ್ರೀಲಂಕಾ ಮತ್ತು ಮಾಲ್ಡೀವ್ಸ್​ ಅನ್ನು ಒಳಗೊಂಡ ತ್ರಿಪಕ್ಷೀಯ ಸಹಕಾರ ಹೊಂದಿರುವ ಉದಾಹರಣೆಗಳನ್ನು ನೀಡಿದರು.

ಭಾರತದ ಸಂಪ್ರದಾಯದಲ್ಲಿ ಅಡಕವಾಗಿರುವ ಗೌರವ, ಸಂವಾದ, ಸಹಯೋಗ, ಶಾಂತಿ ಮತ್ತು ಸಮೃದ್ಧಿ ಎಂಬ ಪಂಚಸೂತ್ರವನ್ನು ಆಧರಿಸಿ ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಿದರೆ ಭಾರತ ಮತ್ತು ಪೆಸಿಫಿಕ್​ ವಲಯದಲ್ಲಿ ಎಲ್ಲರನ್ನೂ ಒಳಗೊಳಿಸಿಕೊಂಡು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ