ನವದೆಹಲಿ, ಸೆ.5- ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸುವುದಿಲ್ಲ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
ಎಸ್‍ಐಎಎಂ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸಲಿದೆ ಎಂಬ ವದಂತಿಗಳು ವ್ಯಾಪಕವಾಗಿವೆ. ಸರ್ಕಾರಕ್ಕೂ ಈ ಕುರಿತಂತೆ ಸಲಹೆಗಳು ಬಂದಿವೆ. ಆದರೆ, ನಾವು ಅಂತಹ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗುವುದಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಎಂದಿನಂತೆ ಮುಂದುವರೆಯಲಿವೆ ಎಂದರು.
ಆಟೋಮೊಬೈಲ್ ಕ್ಷೇತ್ರದ ವ್ಯಾಪಾರ ವೃದ್ಧಿಗೆ ಕೇಂದ್ರ ಸರ್ಕಾರ ಜಿಎಸ್‍ಟಿ ದರ ಕಡಿಮೆ ಮಾಡುವುದೂ ಸೇರಿದಂತೆ ಎಲ್ಲಾ ರೀತಿಯ ಬೆಂಬಲ ನೀಡಲು ಸಿದ್ದವಿದೆ. ಎಲೆಕ್ಟ್ರಿಕಲ್ ವಾಹನಗಳ ಜಿಎಸ್‍ಟಿ ಪ್ರಮಾಣ ಶೇ.12ರಿಂದ 5ಕ್ಕೆ ಇಳಿಸಲಾಗಿದೆ. ಅದೇ ರೀತಿ ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‍ಟಿ ದರವನ್ನು ಶೇ.5ಕ್ಕೇ ಇಳಿಸಲು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಕೇಂದ್ರ ಸರ್ಕಾರ ಐದು ಲಕ್ಷ ಕೋಟಿ ಮೊತ್ತದಲ್ಲಿ ಎಕ್ಸ್‍ಪ್ರೆಸ್ ಹೈವೇ ಸೇರಿದಂತೆ 68 ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಇದರಿಂದ ಮುಂದಿನ ಮೂರು ತಿಂಗಳಲ್ಲಿ ಸರಕುಸಾಗಣೆ ವಾಹನಗಳ ಬೇಡಿಕೆ ಹೆಚ್ಚಾಗಲಿದೆ ಎಂದರು.
ಆಟೋಮೊಬೈಲ್ ಕ್ಷೇತ್ರದ ರಫ್ತು ವಹಿವಾಟನ್ನು ಉತ್ತೇಜಿಸುವ ಸಲುವಾಗಿ ಹಲವಾರು ರಿಯಾಯ್ತಿಗಳು ಹಾಗೂ ಪ್ರೋತ್ಸಾಹಕ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ ಎಂದು ಗಡ್ಕರಿ ಹೇಳಿದರು.