ನವದೆಹಲಿ, ಸೆ.5- ಸಂಚಾರ ನಿಯಮಗಳ ಉಲ್ಲಂಘನೆಗೆ ದಂಡವನ್ನು ದ್ವಿಗುಣಗೊಳಿಸಿರುವ ಹೊಸ ಕಾನೂನು ಜಾರಿಯಿಂದ ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿಯಾಗಿದ್ದು, ಅಲ್ಲಲ್ಲಿ ಪೊಲೀಸರೊಂದಿಗೆ ಸಂಘರ್ಷ ನಡೆಸುತ್ತಿರುವ ಪ್ರಕರಣಗಳು ನಡೆಯುತ್ತಿವೆ.
2019ರ ತಿದ್ದುಪಡಿ ಅನುಸಾರ ಕುಡಿದು ವಾಹನ ಚಾಲನೆ ಮಾಡುವವರಿಗೆ 10ಸಾವಿರ ರೂ. ದಂಡ, ಇದು ಪುನರಾವರ್ತನೆಯಾದರೆ 15ಸಾವಿರ ರೂ. ಜುಲ್ಮಾನೆ ಮತ್ತು ಎರಡು ವರ್ಷ ಜೈಲು ಶಿಕ್ಷೆ. ಲೈಸೆನ್ಸ್ ಇಲ್ಲದಿದ್ದರೆ 5ಸಾವಿರ ರೂ., ಆಂಬ್ಯುಲೆನ್ಸ್ ದಾರಿ ಕೊಡದಿದ್ದರೆ 10ಸಾವಿರ ರೂ., ಪರ್ಮಿಟ್ ಇಲ್ಲದಿದ್ದರೆ ಗರಿಷ್ಠ 10ಸಾವಿರ ರೂ., ಬೇಕಾಬಿಟ್ಟಿ ವಾಹನ ಚಾಲನೆಗೆ 20ಸಾವಿರ ದಂಡ.
ದ್ವಿಚಕ್ರ ವಾಹನದಲ್ಲಿ ಓವರ್ ರೋಡಿಂಗ್‍ಗೆ 2ಸಾವಿರ ರೂ., ವಿಮೆ ಇಲ್ಲದಿದ್ದರೆ 2ಸಾವಿರ ರೂ., ರೇಸಿಂಗ್/ವ್ಹಿಲಿಂಗ್ ಮಾಡಿದರೆ 5ಸಾವಿರ ರೂ. ಹಾಗೂ ಸೀಟ್ ಬೆಲ್ಟ್, ಹೆಲ್ಮೆಟ್ ಧರಿಸದಿದ್ದರೆ ಒಂದು ಸಾವಿರ ರೂ. ದಂಡ ವಿಧಿಸುವುದು ಸೆಪ್ಟೆಂಬರ್ ಒಂದರಿಂದ ಜಾರಿಗೆ ಬಂದಿದೆ.
ಆದರೆ ಬಹಳಷ್ಟು ಮಂದಿಗೆ ಈ ನಿಯಮದ ಬಗ್ಗೆ ಅರಿವಿಲ್ಲ. ಪೊಲೀಸರ ತಪಾಸಣೆ ವೇಳೆ ಹೊಸ ನಿಯಮದ ಅನುಸಾರ ದಂಡ ವಿಧಿಸಿದರೆ ಸವಾರರು ಹೌರಾರುತ್ತಿದ್ದಾರೆ.
ತಮ್ಮ ಬಳಿ ಅಷ್ಟೊಂದು ಹಣವಿಲ್ಲ, ಅಷ್ಟು ದೊಡ್ಡ ಮೊತ್ತದ ದಂಡ ಪಾವತಿ ಮಾಡುವುದಿಲ್ಲ ಎಂದೆಲ್ಲಾ ಗಲಾಟೆ ಮಾಡುತ್ತಿದ್ದು, ಕೆಲವರು ವಾಹನಗಳನ್ನು ಸ್ಥಳದಲ್ಲೇ ಬಿಟ್ಟು ಹೋಗುತ್ತಿದ್ದಾರೆ.
ಈ ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಕೂಡ ಹರಸಾಹಸ ಪಡುವಂತಾಗಿದೆ. ಸ್ಥಳದಲ್ಲಿ ಹಣ ಪಾವತಿಸಲು ಇಚ್ಚಿಸದೆ ಗಲಾಟೆ ಮಾಡುವವರಿಗೆ ದಂಡ ವಿಧಿಸಿ ನ್ಯಾಯಾಲಯಕ್ಕೆ ಕಳುಹಿಸಲಾಗುತ್ತಿದೆ.
ಸ್ಥಳದಲ್ಲೇ ಭಾರೀ ದಂಡ ಪಾವತಿಸಲು ನಿರಾಕರಿಸಿದವರು ನ್ಯಾಯಾಲಯಕ್ಕೆ ಅಲೆದು ಎರಡು-ಮೂರು ದಿನ ಸಮಯ ವ್ಯರ್ಥ ಮಾಡಿ, ವಕೀಲರಿಗೆ ಶುಲ್ಕ ಪಾವತಿಸಿ ನಂತರ ದಂಡ ಪಾವತಿಸಿ ಹೊರ ಬರುವಾಗ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ದೇಶಾದ್ಯಂತ ಸಂಚಾರ ನಿಯಮಗಳ ಉಲ್ಲಂಘನೆಗೆ ದಂಡ ಪ್ರಮಾಣದ ಭಾರೀ ಏರಿಕೆ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ದಂಡ ಪಾವತಿಸಿದವರು ರಶೀದಿಯನ್ನು ಪೋಸ್ಟ್ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಹದಗೆಟ್ಟ ರಸ್ತೆಗಳನ್ನು ಕೂಡ ಪೋಸ್ಟ್ ಮಾಡಿ ಈ ನಿಯಮಗಳ ಉಲ್ಲಂಘನೆಗೆ ದಂಡ ಇಲ್ಲವೇ ಎಂದು ಸವಾರರು ಪ್ರಶ್ನಿಸುತ್ತಿದ್ದಾರೆ.
ಸುಮಾರು 15ರಿಂದ 16 ಸಾವಿರ ದಂಡ ಪಾವತಿಸಿರುವವರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದು, ಬಹಳಷ್ಟು ಕಡೆ ಪರಿಷ್ಕøತ ದಂಡದ ಪ್ರಮಾಣ, ಪೊಲೀಸರು ಬಳಸುವ ಸಿಂಪ್ಯೂಟರ್‍ಗಳಲ್ಲಿ ಅಪ್‍ಡೇಟ್ ಆಗದೇ ಇರುವುದರಿಂದ ಹಳೆಯ ದಂಡವನ್ನೇ ಮುಂದುವರೆಸಲಾಗಿದೆ.
ಬೆಂಗಳೂರು, ನವದೆಹಲಿ, ಮುಂಬೈ ಸೇರಿದಂತೆ ಮಹಾನಗರಗಳಲ್ಲಿ ಪರಿಷ್ಕøತ ದಂಡದ ಪ್ರಮಾಣ ಕಟ್ಟುನಿಟ್ಟಾಗಿ ಜಾರಿಗೆ ಬಂದಿದೆ. ಗ್ರಾಮೀಣ ಭಾಗದಲ್ಲಿ ದುಬಾರಿ ದಂಡ ವಸೂಲಿ ಮಾಡಬೇಕಾದರೆ ಪೊಲೀಸರು ಸಾರ್ವಜನಿಕರ ಜತೆ ಏರು ದನಿಯಲ್ಲಿ ವಾದಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸಾರ್ವಜನಿಕರು ಕೂಡ ಪೊಲೀಸರ ಜತೆ ಜಗಳಕ್ಕೆ ಇಳಿಯುತ್ತಿದ್ದಾರೆ. ಇದರಿಂದಾಗಿ ಅಲ್ಲಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳೂ ಎದುರಾಗುತ್ತಿವೆ.
ನಟ ಮಹೇಶ್‍ಬಾಬು ಅಭಿನಯದ ತೆಲುಗಿನ `ಭರತ್‍ಅನಿನೇನು ‘ಎಂಬ ಚಲನಚಿತ್ರದ ದೃಶ್ಯಗಳಿಂದ ಪ್ರೇರೆಪಿತವಾದಂತೆ ದಂಡದ ಪ್ರಮಾಣವನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದೆ. ಜನಸಾಮಾನ್ಯರ ಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಕಾನೂನು ರೂಪಿಸಿಲ್ಲ. ಸಣ್ಣಪುಟ್ಟ ಅಪರಾಧಗಳಿಗೂ ದುಬಾರಿ ದಂಡ ವಿಧಿಸುತ್ತಿರುವುದರಿಂದ ಆರ್ಥಿಕವಾಗಿ ಹೊರೆಯಾಗುತ್ತಿದೆ.
ಆಟೋ ಹಾಗೂ ಟ್ರಕ್ ಚಾಲಕರು ತಮ್ಮ ಇಡೀ ದಿನದ ದುಡುಮೆಯನ್ನು ತಮ್ಮ ತಪ್ಪಿಗಾಗಿ ದಂಡದ ರೂಪದಲ್ಲಿ ಪಾವತಿಸಿ ಬರಿಗೈಯಲ್ಲಿ ಮನೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.