ವ್ಲಾದಿವೊಸ್ಟಾಕ್: ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಪ್ರವಾಸದಲ್ಲಿ ಭಾರತ ಮತ್ತು ರಷ್ಯಾ ನಡುವೆ 15 ಪ್ರಮುಖ ಒಪ್ಪಂದಗಳು ಏರ್ಪಟ್ಟಿವೆ ಎಂದು ತಿಳಿದುಬಂದಿದೆ.
ರಷ್ಯಾಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರನ್ನು ಬುಧವಾರ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಉಭಯ ದೇಶಗಳ ನಡುವೆ ರಕ್ಷಣಾ ತಂತ್ರಜ್ಞಾನ ಸಹಕಾರ, ಇಂಧನ ಪೂರೈಕೆ ಸೇರಿದಂತೆ 15 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಪ್ರಮುಖವಾಗಿ ಭಾರತದ 20 ಕಡೆ ಅಣು ಸ್ಥಾವರ ಸ್ಥಾಪನೆ ಮಾಡುವ ಒಪ್ಪಂದಕ್ಕೆ ರಷ್ಯಾ ಸಹಿ ಹಾಕಿದ್ದು, ಇದಲ್ಲದೆ ರಕ್ಷಣೆ, ಶಿಕ್ಷಣ ಸೇರಿ 15 ಒಪ್ಪಂದಗಳು ಏರ್ಪಟ್ಟಿವೆ ಎಂದು ತಿಳಿದುಬಂದಿದೆ.
ವ್ಲಾದಿವೊಸ್ಟಾಕ್ ನ ಜ್ವೆಜ್ಡಾ ಶಿಪ್ ಬಿಲ್ಡಿಂಗ್ ಕಾಂಪ್ಲೆಕ್ಸ್ನಲ್ಲಿ ಮೋದಿ ಮತ್ತು ಪುಟಿನ್ ಭಾರತ-ರಷ್ಯಾದ 20ನೇ ವಾರ್ಷಿಕ ದ್ವಿಪಕ್ಷೀಯ ಸಭೆ ನಡೆಸಿದರು. ಈ ವೇಳೆ 15 ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಮೋದಿ ಮತ್ತು ಪುಟಿನ್ ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ, ಕೊಲ್ಲಿ ರಾಷ್ಟ್ರಗಳ ಬಿಕ್ಕಟ್ಟಿನ ಬಗ್ಗೆಯೂ ಚರ್ಚೆ ನಡೆಸಿದರು. ಈ ವೇಳೆ 2019-2024ರವರೆಗೆ ತೈಲ, ನೈಸರ್ಗಿಕ ಅನಿಲ ಪರಿಶೋಧನೆ ಮತ್ತು ಖರೀದಿ ಕುರಿತಂತೆ ಐದು ವರ್ಷಗಳ ಮಾರ್ಗಸೂಚಿ ರೂಪಿಸುವ ಕುರಿತು ಉಭಯ ಮುಖಂಡರು ಮಾತುಕತೆ ನಡೆಸಿದರು. ವಾಣಿಜ್ಯ, ಹೂಡಿಕೆ, ಗಣಿ, ಪರಮಾಣು ಇಂಧನ, ರಕ್ಷಣೆ ಮತ್ತು ಭದ್ರತೆ, ವಾಯು ಮತ್ತು ಸಮುದ್ರ ಮಾರ್ಗ ಸಂಪರ್ಕ, ಸಾರಿಗೆ ವ್ಯವಸ್ಥೆಯಲ್ಲಿ ಮೂಲಸೌಕರ್ಯ ಹೆಚ್ಚಳ, ಬಾಹ್ಯಾಕಾಶ, ಉಭಯ ದೇಶಗಳ ಜನರ ಸಂಪರ್ಕ ಕುರಿತೂ ಮಾತುಕತೆ ನಡೆಸಿದರು.
ಪ್ರಮುಖ ಒಪ್ಪಂದಗಳು
- ಚೆನ್ನೈ-ವ್ಲಾದಿವೊಸ್ಟಾಕ್ ಮಧ್ಯೆ ಪೂರ್ಣ ಪ್ರಮಾಣದ ಸಮುದ್ರ ಮಾರ್ಗ ನಿರ್ಮಾಣ
- ರಕ್ಷಣಾ ತಂತ್ರಜ್ಞಾನ ಸಹಕಾರ
- ಬಾಹ್ಯಾಕಾಶ ವಲಯದಲ್ಲಿ ಪರಸ್ಪರ ನೆರವು, ಗಗನಯಾನಿಗಳಿಗೆ ರಷ್ಯಾದಲ್ಲಿ ತರಬೇತಿ
- ಭಾರತದಲ್ಲಿ 20 ಅಣುಸ್ಥಾವರ ನಿರ್ವಣಕ್ಕೆ ರಷ್ಯಾ ಸಹಯೋಗ
- ವಾಯು ಮಾರ್ಗ ಸಂಪರ್ಕ ಸುಧಾರಣೆ
- ತೈಲ ಮತ್ತು ನೈಸರ್ಗಿಕ ಅನಿಲ
- ವಾಣಿಜ್ಯ ಸಹಕಾರ