ಸಂಚಾರಿ ನಿಯಮ ಉಲ್ಲಂಘನೆ-1000 ರೂ.ಗಳ ಪ್ರತಿ ಚಲನ್‍ನೊಂದಿಗೆ ಹೆಲ್ಮೆಟ್ ಉಚಿತ- ರಾಜಸ್ಥಾನ ಸರ್ಕಾರದ ಚಿಂತನೆ

ಜೈಪುರ್,ಸೆ.5- ಕೇಂದ್ರ ಸರ್ಕಾರ ಮೋಟಾರ್ ವಾಹನ ಕಾಯ್ದೆ(ತಿದ್ದುಪಡಿ)ಯನ್ನು ಜಾರಿಗೆ ತಂದಿರುವ ಬೆನ್ನಲ್ಲೇ ರಾಜಸ್ಥಾನ ಸರ್ಕಾರ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ 1000 ರೂ.ಗಳ ಪ್ರತಿ ಚಲನ್‍ನೊಂದಿಗೆ ಹೆಲ್ಮೆಟ್‍ನ್ನು ಉಚಿತವಾಗಿ ನೀಡುವ ಚಿಂತನೆ ನಡೆಸಿದೆ.

ವಾಹನ ಕಾಯ್ದೆಯಡಿ ಹೆಚ್ಚಿನ ದಂಡ ನೀಡುವವರಿಗೆ ಇದು ಒಂದು ರೀತಿಯ ರಿಯಾಯ್ತಿ ನೀಡಿದಂತಾಗಿದೆ.

ಸಾರಿಗೆ ಸಚಿವ ಪ್ರತಾಪ್ ಸಿಂಗ್ ಮಾತನಾಡಿ, ಹೆಲ್ಮೆಟ್ ಧರಿಸದೆ ಸಂಚಾರಿ ನಿಯಮ ಪಾಲಿಸದ ಚಾಲಕರಿಗೆ 1000 ರೂ.ಗಳ ದಂಡ ಚಲನ್‍ನೊಂದಿಗೆ ಐಎಸ್‍ಐ ಗುರುತುಳ್ಳ ಹೆಲ್ಮೆಟ್‍ಗಳನ್ನು ಉಚಿತವಾಗಿ ನೀಡುವ ಯೋಜನೆಯನ್ನು ಸರ್ಕಾರ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಹೊಸ ಕಾಯ್ದೆ ಅನ್ವಯ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಭಾರೀ ಜುಲ್ಮಾನೆಯ ಬಿಸಿ ಮುಟ್ಟಿಸುತ್ತಿರುವ ಪೊಲೀಸರು ಇನ್ನೊಂದೆಡೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದ್ದಾರೆ.

ಎರಡರಿಂದ ಹತ್ತು ಪಟ್ಟುಗಳಷ್ಟು ದಂಡ ವಿಧಿಸುತ್ತಿರುವುದರಿಂದ ಹೆದರಿ ಕಂಗಾಲಾಗಿರುವ ವಾಹನ ಸವಾರರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಭಾರೀ ದಂಡ ಪ್ರಮಾಣವನ್ನು ತಗ್ಗಿಸಬೇಕೆಂದು ಸಂಘಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ