ಬೆಂಗಳೂರು,ಸೆ.4- ಡಿ.ಕೆ.ಶಿವಕುಮಾರ್ ಅವರ ಬಂಧನವನ್ನು ವಿರೋಧಿಸಿ ಇಂದು ಬೆಳಗ್ಗೆ ನಗರದ ಬ್ರಿಗೇಡ್ ರಸ್ತೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ರಸ್ತೆತಡೆ ನಡೆಸಿ ಪ್ರತಿಭಟಿಸಿದರು.
ದಿಢೀರ್ ಪ್ರತಿಭಟನೆಯಿಂದ ಎಂಜಿರಸ್ತೆ, ರೆಸಿಡೆನ್ಷಿಯಲ್ ರಸ್ತೆ, ಕಸ್ತೂರಿ ಬಾ ರಸ್ತೆ ಸೇರಿದಂತೆ ಸುತ್ತಮುತ್ತ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಂತಿನಗರದ ಶಾಸಕ ಎನ್.ಎ.ಹ್ಯಾರೀಸ್ ಅವರು, ಕಳ್ಳರನ್ನು ಇಟ್ಟುಕೊಂಡು ಸರ್ಕಾರ ರಚನೆ ಮಾಡಿರುವ ಬಿಜೆಪಿಯವರು ಕಾಂಗ್ರೆಸಿಗರನ್ನು ಬಂಧಿಸುವ ಮೂಲಕ ನಮ್ಮನ್ನು ಕಳ್ಳರನ್ನಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೈಲಿಗೆ ಹೋಗಿ ಬಂದವರನ್ನು ಮುಖ್ಯಮಂತ್ರಿ ಮಾಡುತ್ತಾರೆ. ಕ್ರಿಮಿನಲ್ ಕೇಸ್ ಇರುವವರನ್ನು ಮಂತ್ರಿಗಳನ್ನಾಗಿ ಮಾಡುತ್ತಾರೆ. ಅವರನ್ನೆಲ್ಲ ಬಿಟ್ಟು ಕಾಂಗ್ರೆಸಿಗರ ಮೇಲೆ ಮಾತ್ರ ದಾಳಿಗಳಾಗುತ್ತವೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯ ನೆರೆಯಿಂದ ಸಂತ್ರಸ್ತವಾಗಿದೆ. ಪ್ರಧಾನಿಯವರನ್ನು ಭೇಟಿ ಮಾಡಿ ರಾಜ್ಯಕ್ಕೆ ಹೆಚ್ಚಿನ ಅನುದಾನ ತರಬೇಕು, ಬಿಜೆಪಿ ನಾಯಕರಿಗೆ ಕೇಂದ್ರ ನಾಯಕರನ್ನು ಕೇಳುವ ತಾಕತ್ತಿಲ್ಲ. ದೇಶಾದ್ಯಂತ ಉದ್ಯೋಗಿಗಳ ಕಡಿತವಾಗುತ್ತಿದೆ. ಆರ್ಥಿಕತೆ ನೆಲಕಚ್ಚಿದೆ. ಡಾಲರ್ ಎದುರು ರೂಪಾಯಿ ಕುಸಿದುಬಿದ್ದಿದೆ. ಇದೆಲ್ಲವನ್ನು ಮರೆಮಾಚಿ ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ನಾಯಕರ ವಿರುದ್ಧ ಷಡ್ಯಂತರ ಮಾಡಿ ಬಂಧಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಳ್ಳು ಆರೋಪಗಳನ್ನು ಹೊರಿಸಿ ಬ್ಲಾಕ್ಮೇಲ್ ಮಾಡಲಾಗುತ್ತಿದೆ. ನಮ್ಮ ಪ್ರಭಾವಿ ನಾಯಕರನ್ನು ಸೆಳೆದುಕೊಳ್ಳುವ ಸಲುವಾಗಿ ಬಿಜೆಪಿ ಇಡಿ, ಸಿಬಿಐ, ಐಟಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಬಿಜೆಪಿ ಸೇರಿದವರ ಮೇಲಿನ ಆರೋಪಗಳನ್ನು ಮರೆಮಾಚಲಾಗುತ್ತಿದೆ ಎಂದು ಕಾರ್ಯಕರ್ತರು ದೂರಿದ್ದಾರೆ.