ಬೆಂಗಳೂರು,ಸೆ.4- ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ನಮ್ಮದೇನು ತಕರಾರು ಇಲ್ಲ. ಒಂದು ವೇಳೆ ಕಾನೂನು ಕೈಗೆತ್ತಿಕೊಂಡರೆ ಪೊಲೀಸರು ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಎಚ್ಚರಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿನಡಿ ಪ್ರತಿಭಟನೆ ನಡೆಸಲು ಎಲ್ಲರಿಗೂ ಅವಕಾಶವಿದೆ. ಆದರೆ ಕಾನೂನು ಮೀರಿ ಸಾರ್ವಜನಿಕರ ಆಸ್ತಿಪಾಸ್ತಿಗಳ ಮೇಲೆ ಹಾನಿ ಮಾಡಿದರೆ ಕ್ರಮ ಜರುಗಿಸುವುದು ಅನಿವಾರ್ಯ ಎಂದರು.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿರುವುದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ರಾಜಕೀಯ ದ್ವೇಷದ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇಡಿ, ಐಟಿ ಮತ್ತು ಸಿಬಿಐ ಕೇಂದ್ರದ ಸ್ವಾಯತ್ತ ಸಂಸ್ಥೆಗಳು. ಅವುಗಳ ಮೇಲೆ ಯಾರೊಬ್ಬರು ಪ್ರಭಾವ ಬೀರಲು ಸಾಧ್ಯವೇ ಇಲ್ಲ. ಡಿ.ಕೆ.ಶಿವಕುಮಾರ್ ಅವರನ್ನು ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಅಧಿಕಾರಿಗಳಿಗೆ ಮನವರಿಕೆಯಾಗಿರುವುದರಿಂದಲೇ ಅವರನ್ನು ಬಂಧಿಸಿದ್ದಾರೆ. ಅದಕ್ಕೂ ನಮಗೂ ಏನು ಸಂಬಂಧ ಎಂದರು.
ಈ ಹಿಂದೆ ಯುಪಿಎ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ ಅನೇಕ ಪ್ರಕರಣದಲ್ಲಿ ಕೆಲವರನ್ನು ಸಿಬಿಐ, ಇಡಿ ವಶಕ್ಕೆ ಪಡೆದಿತ್ತು. ಹಾಗಾದರೆ ಅಂದು ಕೇಂದ್ರ ಸರ್ಕಾರ ಈ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿತ್ತೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರು ಡಿಕೆಶಿ ಬಂಧನದ ಪ್ರಕರಣಕ್ಕೆ ಪ್ರತಿಭಟನೆ ನಡೆಸುವುದು ಸರಿಯಲ್ಲ. ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ ಅನೇಕರ ಮೇಲೆ ದೂರು ದಾಖಲಾಗಿ ವಿಚಾರಣೆ ನಡೆಸಿತ್ತು. ಹಾಗಾದರೆ ಅಂದು ನಾವು ಕೇಂದ್ರ ಸರ್ಕಾರದ ಮೇಲೆ ಇದೇ ರೀತಿ ಆರೋಪ ಮಾಡಿದ್ದೆವೆ ಎಂದು ಆಕ್ಷೇಪಿಸಿದರು.
ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿದವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿದೆ. ಶಿವಕುಮಾರ್ ಏನೂ ತಪ್ಪೇ ಮಾಡಿಲ್ಲ ಎಂದರೆ ನ್ಯಾಯಾಲಯ ಕ್ಲೀನ್ ಚಿಟ್ ಕೊಡಲಿದೆ. ಅವರನ್ನು ವಿಚಾರಣೆಗಾಗಿ ಬಂಧಿಸಿದ್ದೇ ತಪ್ಪು ಎಂದು ಕಾಂಗ್ರೆಸ್ನ ವಾದ ಸರಿಯಲ್ಲ ಎಂದು ಹೇಳಿದರು.