ನವದೆಹಲಿ: ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಪಾಕಿಸ್ತಾನ ಕುಲಭೂಷಣ್ ಜಾದವ್ ಮೇಲೆ ತೀವ್ರ ಒತ್ತಡ ಹೇರುತ್ತಿದೆ ಎಂದು ಭಾರತ ಆಕ್ರೋಶ ವ್ಯಕ್ತಪಡಿಸಿದೆ.
ಗೂಢಚಾರಿಕೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಭಾರತದ ನಿವೃತ್ತ ನೌಕಾ ಅಧಿಕಾರಿ ಕುಲಭೂಷಣ್ ಜಾಧವ್ ರನ್ನು ಭಾರತೀಯ ರಾಯಭಾರಿ ಗೌರವ್ ಅಹ್ಲುವಾಲಿಯಾ ನಿನ್ನೆ ಭೇಟಿ ಮಾಡಿದ್ದರು. ಭೇಟಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಲಭೂಷಣ್ ಜಾದವ್ ಮೇಲೆ ಪಾಕಿಸ್ತಾನ ಸುಳ್ಳು ಆರೋಪಗಳನ್ನು ಹೊರಿಸಿ ಬಂಧಿಸಿದೆ. ಅಲ್ಲದೆ ಅವರು ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ತೀವ್ರ ಒತ್ತಡ ಹೇರುತ್ತಿದೆ. ಈ ಹಿಂದೆ ಕುಲಭೂಷಣ್ ಜಾದವ್ ನೀಡಿದ್ದ ಹೇಳಿಕೆ ಕೂಡ ಪಾಕಿಸ್ತಾನದ ನಿರ್ದೇಶನದಂತೆ ಬಂದ ಹೇಳಿಕೆಯಾಗಿದೆ ಎಂದು ಹೇಳಿದ್ದಾರೆ.
‘ಕುಲಭೂಷಣ್ ಜಾಧವ್ ಗೆ ಸುಳ್ಳು ಆರೋಪಗಳನ್ನು ಒಪ್ಪಿಕೊಳ್ಳುವಂತೆ ಪಾಕಿಸ್ತಾನ ಒತ್ತಡ ಹೇರಿದೆ. ಜಾಧವ್ ರಿಂದ ಪಾಕಿಸ್ತಾನ ಗಿಳಿಪಾಠ ಹೇಳಿಸಿದ್ದು, ಇದರಿಂದಾಗಿ ಅವರು ಬಹಳ ಒತ್ತಡದಲ್ಲಿ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಈ ಹಿಂದೆ ಅಂತಾರಾಷ್ಟ್ರೀಯ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪಾಕಿಸ್ತಾನ ಜಾಧವ್ ಭೇಟಿಗೆ ಅವಕಾಶ ನೀಡಿತ್ತು. ಈ ವೇಳೆ ಪಾಕಿಸ್ತಾನ ಇಲ್ಲ ಸಲ್ಲದ ಆರೋಪಗಳನ್ನು ಗಿಳಿ ಪಾಠದಂತೆ ಒಪ್ಪಿಸಲು ಜಾಧವ್ ಮೇಲೆ ತೀವ್ರ ಒತ್ತಡವನ್ನು ಹೇರಿದೆ. ನಾವು ಸಮಗ್ರ ವರದಿಗಾಗಿ ಕಾಯುತ್ತಿದ್ದೇವೆ ಅಂತಾ ವಿದೇಶಾಂಗ ಇಲಾಖೆ ತಿಳಿಸಿದೆ. ಅಲ್ಲದೇ ವಿದೇಶಾಂಗ ಸಚಿವ ಎಸ್. ಜೈಶಂಕರ್ ಜಾಧವ್ ತಾಯಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದಾರೆ.
ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಕುಲಭೂಷಣ್ ಜಾಧವ್ ರನ್ನು ಪಾಕಿಸ್ತಾನ ಬಂಧಿಸಿತ್ತು. ಅಲ್ಲದೇ ಅಲ್ಲಿನ ಮಿಲಿಟರಿ ನ್ಯಾಯಾಲಯ ಅವರಿಗೆ ಮರಣ ದಂಡನೆ ಶಿಕ್ಷೆ ಕೂಡ ವಿಧಿಸಿತ್ತು. ಬಳಿಕ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿ ಮರಣದಂಡನೆಗೆ ತಡೆಯಾಜ್ಞೆ ನೀಡುವಂತೆ ಮಾಡಿತ್ತು