ಬೆಂಗಳೂರು,ಸೆ.3- ಇನ್ನು ಮುಂದೆ ಕಚೇರಿಗಳಲ್ಲಿ ಯಾವುದೇ ಕಡತಗಳು ನಾಪತ್ತೆಯಾದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಆಯುಕ್ತ ಪ್ರಕಾಶ್ ಎಚ್ಚರಿಸಿದ್ದಾರೆ.
ಇತ್ತೀಚೆಗೆ ಕೆಲವು ಮಹತ್ವದ ಕಡತಗಳು ರಾತ್ರೋರಾತ್ರಿ ನಾಪತ್ತೆಯಾಗುತ್ತಿದ್ದವು.ಇದರಿಂದ ಎಚ್ಚೆತ್ತುಕೊಂಡಿರುವ ಆಯುಕ್ತರು, ಕಡತ ನಾಪತ್ತೆಗೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುತ್ತೇವೆ ಎಂದು ಬಿಸಿ ಮುಟಿಸಿದ್ದಾರೆ.
ಬಿಡಿಎಗೆ ಸೇರಿದ ಕೆಲವು ಮಹತ್ವದ ಕಡತಗಳು ನಾಪತ್ತೆಯಾಗಿ ಪ್ರಮುಖ ರಾಜಕಾರಣಿಗಳು, ಮಧ್ಯವರ್ತಿಗಳು ಇಲ್ಲವೇ ಬೇರೊಬ್ಬರ ಕೈಗೆ ಸೇರುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ.
ಕಚೇರಿಯಲ್ಲಿರುವ ಕಾಣದ ಕೈಗಳಿಂದಲೇ ಈ ಕೃತ್ಯ ನಡೆಯುತ್ತಿದ್ದು, ಕಡತಗಳು ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಟ್ವೀಟರ್, ಮೇಲ್ ಮೂಲಕವೂ ಸೋರಿಕೆಯಾಗುತ್ತಿವೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಕಚೇರಿಯಲ್ಲಿ ಬಿಗಿ ಕ್ರಮ ತೆಗೆದುಕೊಳ್ಳಲು ಆಯುಕ್ತರು ಮುಂದಾಗಿದ್ದಾರೆ.
ವಾಟ್ಸಪ್, ಟ್ವೀಟರ್, ಮೇಲ್ ಮೂಲಕ, ಇನ್ಯಾವುದೇ ರೀತಿಯಲ್ಲಿ ಕಡತಗಳು ಸೋರಿಕೆಯಾದರೂ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ. ನಾನು ಶಿಸ್ತುಕ್ರಮ ಜರುಗಿಸಲು ಹಿಂದೆಮುಂದೆ ನೋಡುವುದಿಲ್ಲ ಎಂದು ಅವರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಕಡತಗಳನ್ನು ಕಣ್ಮರೆಯಾದರೂ ಉದ್ದೇಶಪೂರ್ವಕವಾಗಿಯೇ ಸೋರಿಕೆ ಮಾಡಲಾಗುತ್ತಿದೆ ಎಂದು ಪರಿಗಣಿಸಲಾಗುವುದು. ಯಾರೇ ಎಷ್ಟೇ ಪ್ರಭಾವಿಗಳಾದರೂ ಸರಿಯೇ ನಾನು ಕ್ರಮ ಜರುಗಿಸಲು ಹಿಂಜರಿಯುವುದಿಲ್ಲ ಎಂದು ಪ್ರಕಾಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.