ಹುಬ್ಬಳ್ಳಿ,ಸೆ.1- ಯಡಿಯೂರಪ್ಪನವರು ಹೈಕಮಾಂಡ್ಗೆ ಬೇಡವಾದ ಶಿಶು ಎಂದು ಪದೇ ಪದೇ ಹೇಳುತ್ತಿರುವ ಸಿದ್ದರಾಮಯ್ಯನವರ ಮಾತಿಗೆ ಮಹತ್ವ ಕೊಡುವ ಅಗತ್ಯವಿಲ್ಲ. ಕಾಂಗ್ರೆಸ್ನಲ್ಲಿ ಸಿದ್ದಾರಾಮಯ್ಯನವರ ಪರಿಸ್ಥಿತಿ ಏನಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಿ ಎಂದು ಸಚಿವ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ.
ಅವರಿಗೆ ಬೇರೆ ವಿಷಯವಿಲ್ಲ. ಸುಮ್ಮನೆ ಟೀಕೆ ಮಾಡಬೇಕೆಂದು ಮಾಡುತ್ತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯೆಂದು ಹೈಕಮಾಂಡ್ ತೀರ್ಮಾನ ಮಾಡಿದೆ. ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಮಯವಿಲ್ಲ. ವಿಪಕ್ಷ ನಾಯಕ ನಾಗಲು ಡಿಕೆಶಿ, ಪರಮೇಶ್ವರ್, ಸಿದ್ದರಾಮಯ್ಯನವರ ನಡುವೆ ಫೈಟ್ ಇದೆ. ಹೀಗಿರುವಾಗ ಯಡಿಯೂರಪ್ಪನವರನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ ಎಂದು ಶೆಟ್ಟರ್ ಹೇಳಿದರು.
ಸಮ್ಮಿಶ್ರ ಸರ್ಕಾರ ಬೀಳಲು ಸಿದ್ದರಾಮಯ್ಯನವರೇ ಕಾರಣ.ಈ ಸರ್ಕಾರವನ್ನು ಕೆಡವಲು ಅವರೇ ಟೈಂ ಬಾಂಬ್ ಫಿಕ್ಸ್ ಮಾಡಿದ್ದರು. ಈಗ ಬಾಂಬ್ ಸ್ಫೋಟವಾಗಿ ಸರ್ಕಾರ ಮನೆಗೆ ಹೋಗಿದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಇಬ್ಬರೂ ಪರಸ್ಪರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಇಡಿ ವಿಚಾರವಾಗಿ ಬಿಜೆಪಿಯವರ ಮೇಲೆ ಆರೋಪ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಇಲಾಖೆಗಳು ತಮ್ಮದೆಯಾದ ಮಾಹಿತಿ ಪ್ರಕಾರ ದಾಳಿ ನಡೆಸಿ ವಿಚಾರಣೆ ನಡೆಸುತ್ತವೆ. ಕಾನೂನು ರೀತಿಯಲ್ಲಿ ಏನು ಕೆಲಸಗಳಾಗಬೇಕೋ ಅವು ಆಗುತ್ತವೆ. ಬಿಜೆಪಿ ಯಾವುದೇ ರೀತಿಯ ದ್ವೇಷ ರಾಜಕಾರಣ ಮಾಡುವುದಿಲ್ಲ. ಶಿವಕುಮಾರ್ ಅವರು ನಿಜವಾಗಿಯೂ ಸರಿಯಿದ್ದರೆ ತನಿಖೆಗಳಿಗೆ ಹೆದರುವ ಅವಶ್ಯಕತೆಯಿಲ್ಲ ಎಂದು ಹೇಳಿದರು.
ಜಿಂದಾಲ್ ವಿಷಯವಾಗಿ ಈ ಹಿಂದಿನ ಸರ್ಕಾರ ಏನೇನು ರಾಮಾಯಣ ಮಾಡಿದೆಯೋ ಗೊತ್ತಿಲ್ಲ. ನಾನು ಫೈಲ್ಗಳನ್ನು ತರಿಸಿ ನೋಡಿ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಶೆಟ್ಟರ್ ತಿಳಿಸಿದರು.