ಬೆಂಗಳೂರು, ಆ.31- ಕುಂದಾ ನಗರಿ ಬೆಳಗಾವಿಯಲ್ಲಿ ಅಕ್ಟೋಬರ್ ತಿಂಗಳ ಮಧ್ಯ ಭಾಗದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಚಳಿಗಾಲದ ಅಧಿವೇಶನವನ್ನು ನಡೆಸಲು ತೀರ್ಮಾನಿಸಿದೆ.
ಸಾಮಾನ್ಯವಾಗಿ ಈ ಹಿಂದೆ ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ 10 ದಿನಗಳ ಕಾಲ ಬೆಳಗಾವಿಯಲ್ಲಿರುವ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನವನ್ನು ನಡೆಸುವ ಮೂಲಕ ಪ್ರತ್ಯೇಕ ಕರ್ನಾಟಕದ ಕೂಗಿಗೆ ಕಡಿವಾಣ ಹಾಕಲಾಗಿತ್ತು.
ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಅಕ್ಟೋಬರ್ನಲ್ಲೇ 10 ದಿನಗಳ ಕಾಲ ಅಧಿವೇಶನ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಅಧಿಕಾರಿಗಳಿಗೆ ಸೂಚನೆ ಕೊಟ್ಟಿದೆ.
ಈ ಬಾರಿ ಫೆಬ್ರವರಿ ತಿಂಗಳಿನಲ್ಲಿ ಯಡಿಯೂರಪ್ಪ ತಮ್ಮ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆ ಮಾಡಲಿದ್ದಾರೆ.ಇದಕ್ಕೆ ಸಿದ್ಧತೆಗಳನ್ನು ಜನವರಿ ತಿಂಗಳಿನಲ್ಲೇ ಕೈಗೊಳ್ಳಬೇಕಾದ ಅಗತ್ಯವಿರುವುದರಿಂದ ಅಕ್ಟೋಬರ್ನಲ್ಲಿ ಅಧಿವೇಶನ ನಡೆಸಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಜೆಟ್ ಸಿದ್ಧತೆಗೆ ಹೆಚ್ಚಿನ ಅಧಿಕಾರಿಗಳು ತೊಡಗಿಸಿಕೊಳ್ಳಬೇಕು. ಬೆಳಗಾವಿಯಲ್ಲಿ ಅಧಿವೇಶನ ನಡೆದರೆ ಇಡೀ ಆಡಳಿತ ಯಂತ್ರವೇ ಅಲ್ಲಿಗೆ ತೆರಳಬೇಕು. ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೂಡ ಭಾಗವಹಿಸುವುದರಿಂದ ಈ ಬಾರಿ ಮುಂಗಡವಾಗಿಯೇ ಅಧಿವೇಶನ ನಡೆಸಲು ಬಿಜೆಪಿ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಬಿಎಸ್ವೈ ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆ ಚರ್ಚಿಸಿದ್ದು, ಸಚಿವ ಸಂಪುಟ ಸಭೆಯಲ್ಲಿ ಅಧಿಕೃತವಾಗಿ ಚರ್ಚಿಸಿದ ನಂತರ ದಿನಾಂಕ ನಿಗದಿಪಡಿಸಲಿದ್ದಾರೆ ಎಂದು ಸರ್ಕಾರದ ವಿಶ್ವಸನೀಯಮೂಲಗಳು ತಿಳಿಸಿವೆ.
ಇಲಾಖೆಗಳ ಹಸ್ತಾಂತರ:
ಇನ್ನು ಉತ್ತರ ಕರ್ನಾಟಕ ಜನತೆಯ ಬಹುದಿನಗಳ ಬೇಡಿಕೆಯಂತೆ ಬೆಳಗಾವಿಯಲ್ಲಿ ಸುವರ್ಣ ಸೌಧವು ವರ್ಷಪೂರ್ತಿ ಕಾರ್ಯನಿರ್ವಹಿಸುವಂತೆ ಕೆಲವು ಇಲಾಖೆಗಳನ್ನು ಇಲ್ಲಿಗೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ. ಕಳೆದ ಅಧಿವೇಶನದಲ್ಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಕೃಷ್ಣಾ ಜಲಭಾಗ್ಯ ನಿಗಮ, ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ಸೇರಿದಂತೆ ಕಂದಾಯ, ನೀರಾವರಿ ಮತ್ತಿತರ ಇಲಾಖೆಗಳನ್ನು ಇಲ್ಲಿಯೇ ಶಾಶ್ವತವಾಗಿ ಕಾರ್ಯಾರಂಭ ಮಾಡಲು ಇಲಾಖೆಗಳನ್ನು ವರ್ಗಾವಣೆ ಮಾಡುವುದಾಗಿ ಸದನದಲ್ಲಿ ಘೋಷಣೆ ಮಾಡಿದ್ದರು.
ಆದರೆ ಇದು ಕಾಗದದ ಮೇಲೆಯೇ ಉಳಿದಿದೆಯೇ ಹೊರತು ಅನುಷ್ಠಾನವಾಗಿಲ್ಲ. ಅಲ್ಲದೆ ಸುವರ್ಣಸೌಧ ಕೇವಲ ಅಧಿವೇಶನ ಸಂದರ್ಭದಲ್ಲಿ ಮಾತ್ರ ಸಕ್ರಿಯವಾಗಿರುತ್ತದೆ.ಉಳಿದ ದಿನಗಳಲ್ಲಿ ಇದು ಇದ್ದೂ ಇಲ್ಲದಂತೆ ಆಗಿದೆ ಎಂಬ ಆರೋಪ ಕೇಳಿಬಂದಿತ್ತು.
ಅಲ್ಲದೆ ಸುವರ್ಣಸೌಧ ನಿರ್ವಹಣೆ ಸರ್ಕಾರಕ್ಕೆ ಬಿಳಿ ಆನೆಯಂತಾಗಿ ಪರಿಣಮಿಸಿತ್ತು.ಇದರ ಹೊರೆ ತಪ್ಪಿಸುವುದು ಜೊತೆಗೆ ನೆಲ, ಜಲ, ಭಾಷೆ ಮುಂದಿಟ್ಟುಕೊಂಡು ಆಗಾಗ್ಗೆ ಕ್ಯಾತೆ ತೆಗೆಯುವ ಎಂಇಎಸ್ಗೆ ಶಾಶ್ವತವಾಗಿ ಕಡಿವಾಣ ಹಾಕಲು ಸುವರ್ಣಸೌಧದಲ್ಲಿ ವರ್ಷಪೂರ್ತಿ ಕಾರ್ಯನಿರ್ವಹಿಸಲು ಇಲಾಖೆಗಳನ್ನು ವರ್ಗಾಯಿಸುವ ಸಾಧ್ಯತೆ ಇದೆ.
ಬೆಳಗಾವಿಯನ್ನು ಕರ್ನಾಟಕದ ಎರಡನೇ ರಾಜಧಾನಿ ಮಾಡಬೇಕೆಂಬ ಕೂಗು ಕೇಳಿ ಬಂದಿದೆ.ಸಂವಿಧಾನದಲ್ಲಿ ಯಾವುದೇ ರಾಜ್ಯದ ಎರಡನೇ ರಾಜಧಾನಿಗೆ ಮಾನ್ಯತೆ ಇರುವುದಿಲ್ಲ. ಇದೊಂದು ಆಡಳಿತಾತ್ಮಕ ವ್ಯವಸ್ಥೆ ಎಂಬುದಷ್ಟೇ ಪರಿಗಣಿತವಾಗುತ್ತದೆ.ಎರಡನೇ ರಾಜಧಾನಿಯಾದರೆ ಸರ್ಕಾರದಿಂದ ಕೆಲವು ಅಭಿವೃದ್ಧಿ ಯೋಜನೆಗಳು ಘೋಷಣೆಯಾಗಬಹುದು.ಅಲ್ಲದೆ ಗಡಿ ವಿವಾದವನ್ನು ಮುಂದಿಟ್ಟುಕೊಂಡು ಆಗಾಗ್ಗೆ ವಿವಾದ ಸೃಷ್ಟಿಸುವ ಎಂಇಎಸ್ನ ಕ್ಯಾತೆಗೆ ಶಾಶ್ವತ ಕಡಿವಾಣ ಬೀಳಲಿದೆ.
ಸರ್ಕಾರ ಈ ಅಧಿವೇಶನದಲ್ಲಾದರೂ ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಘೋಷಣೆ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕು.