ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ
ಬೆಂಗಳೂರು,ಆ.30- ತೀವ್ರ ಜಿದ್ದಾಜಿದ್ದಿನಿಂದ ಕೂಡಿರುವ ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್) ಅಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದೆ.
ಸಚಿವ ಸ್ಥಾನ ಕೈ ತಪ್ಪಿ ಮುನಿಸಿಕೊಂಡಿದ್ದ ಬೆಳಗಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಜೆಡಿಎಸ್ನ ಮಾಜಿ ಸಚಿವ ಎಚ್.ಡಿ.ರೇವಣ್ಣ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.
ಆದರೆ ನಾಳೆ ನಡೆಯಲಿರುವ ಚುನಾವಣೆಗೆ ಎಚ್.ಡಿ.ರೇವಣ್ಣ ಸ್ಪರ್ಧಿಸುತ್ತಾರೆಯೇ ಇಲ್ಲವೇ ಕಣದಿಂದ ಹಿಂದೆ ಸರಿಯುತ್ತಾರೆಯೇ ಎಂಬುದು ಈವರೆಗೂ ದೃಢಪಟ್ಟಿಲ್ಲ.
ಒಂದು ವೇಳೆ ಬಾಲಚಂದ್ರ ಜಾರಕಿಹೊಳಿ ಪರ ಹೆಚ್ಚಿನ ನಿರ್ದೇಶಕರು ಬೆಂಬಲಕ್ಕೆ ನಿಂತರೆ ರೇವಣ್ಣ ಕಣದಿಂದ ಹಿಂದೆ ಸರಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ರೇವಣ್ಣ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದಿದ್ದರೆ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾನಾಯಕ್ ಈಗಾಗಲೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿ ಜಾರಕಿಹೊಳಿಗೆ ಬೆಂಬಲ ಸೂಚಿಸಿದ್ದಾರೆ.
ಶತಾಯಗತಾಯ ಕೆಎಂಎಫ್ನಲ್ಲಿ ಅಧ್ಯಕ್ಷ ಸ್ಥಾನವನ್ನು ಪಡೆಯಲೇಬೇಕೆಂದು ಪಣ ತೊಟ್ಟಿರುವ ಜಾರಕಿಹೊಳಿ ಈಗಾಗಲೇ ಕಾಂಗ್ರೆಸ್-ಜೆಡಿಎಸ್-ಬಿಜೆಪಿ ಬೆಂಬಲಿತ 10ಕ್ಕೂ ಹೆಚ್ಚು ನಿರ್ದೇಶಕರನ್ನು ಮುಂಬೈಗೆ ಕರೆದೊಯ್ದಿದ್ದಾರೆ.
ಇಂದು ಸಂಜೆ ಇಲ್ಲವೆ ನಾಳೆ ಬೆಳಗ್ಗೆ ಬೆಂಗಳೂರಿಗೆ ಈ ಎಲ್ಲ ನಿರ್ದೇಶಕರು ವಾಪಸ್ಸಾಗಲಿದ್ದು, ನೇರವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಒಟ್ಟು 16 ಮಂದಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಇದರಲ್ಲಿ 12 ಮಂದಿ ವಿವಿಧ ಒಕ್ಕೂಟಗಳ ನಿರ್ದೇಶಕರು, ಒಬ್ಬರು ಸರ್ಕಾರದ ನಾಮನಿರ್ದೇಶಕ ಸದಸ್ಯರು, ಇಬ್ಬರು ಅಧಿಕಾರಿಗಳು ಮತ ಚಲಾಯಿಸಲಿದ್ದಾರೆ.
ಇದರಲ್ಲಿ ಈಗಾಗಲೇ ಹತ್ತಕ್ಕೂ ಹೆಚ್ಚು ನಿರ್ದೇಶಕರು, ಅಧಿಕಾರಿಗಳು, ಬಾಲಚಂದ್ರ ಜಾರಕಿಹೊಳಿಗೆ ಬೆಂಬಲ ಸೂಚಿಸಿರುವುದರಿಂದ ಬಹುತೇಕ ಅಧ್ಯಕ್ಷ ಸ್ಥಾನ ಅವರ ಪಾಲಾಗುವುದು ಖಚಿತವಾಗಿದೆ.
ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಪಡೆಯಲೇಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ನಿನ್ನೆಯೇ ಬಾಲಚಂದ್ರ ಜಾರಕಿಹೊಳಿ ನಿರ್ದೇಶಕರನ್ನು ಮುಂಬೈನ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.