ಬೆಂಗಳೂರು,ಆ.30- ಇಂದು ಮಧ್ಯಾಹ್ನ ಒಂದು ಗಂಟೆಗೆ ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗಬೇಕೆಂದು ಜಾರಿ ನಿರ್ದೇಶನಾಲಯ (ಇಡಿ)ನಿನ್ನೆ ರಾತ್ರಿ 9.40ಕ್ಕೆ ಸಮನ್ಸ್ ನೀಡಿದೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಆತುರಾತುರವಾಗಿ ನೋಟಿಸ್ ನೀಡಲಾಗಿದ್ದು, ದೇಶದ ಕಾನೂನಿನ ಮೇಲೆ ನಂಬಿಕೆ ಇದೆ. ಖಂಡಿತಾ ವಿಚಾರಣೆಗೆ ಹಾಜರಾಗುತ್ತೇನೆ. ಪೂರ್ಣ ಪ್ರಮಾಣದ ಸಹಕಾರ ನೀಡುತ್ತೇನೆ. ದೇಶದ ಕಾನೂನುಗಳನ್ನು ಪಾಲನೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ಮನೆಯ ಮೇಲೆ ಆದಾಯ ತೆರಿಗೆ ದಾಳಿ ಸಂಪೂರ್ಣ ರಾಜಕೀಯ ಪ್ರೇರಿತವಾಗಿತ್ತು. ಗುಜರಾತಿನ ಶಾಸಕರಿಗೆ ಬೆಂಗಳೂರಿನಲ್ಲಿ ಆತಿಥ್ಯ ನೀಡಿದ್ದರಿಂದಾಗಿ ಕೇಂದ್ರ ಸರ್ಕಾರ ದಾಳಿ ಮಾಡಲು ಪ್ರೇರೆಪಿಸಿದೆ. ನಾನು ನಿಷ್ಠಾವಂತ ಕಾಂಗ್ರೆಸಿನ ಸೈನಿಕ. ಜವಾಬ್ದಾರಿಯುತ ರಾಜಕಾರಣಿ, ಪಕ್ಷ ಏನು ಹೇಳಿತ್ತೋ ಅದನ್ನು ಮಾಡಿದ್ದೇನೆ. ಆ ಕಾರಣಕ್ಕಾಗಿ ನಾನು ದಾಳಿಗೆ ಗುರಿಯಾದೆ ಎಂದಿದ್ದಾರೆ.
ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ನನ್ನ ಮೇಲಿನ ಎಲ್ಲಾ ಪ್ರಕರಣಗಳನ್ನು ಕಾನೂನಾತ್ಮಕ ಹಾಗೂ ರಾಜಕೀಯವಾಗಿ ಎದುರಿಸಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ವಿಚಾರಣೆಗೆ ಈ ಮೊದಲು ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು. ಅದನ್ನು ರದ್ದು ಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿ ಹೈಕೋರ್ಟ್ ನಿನ್ನೆ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಸಿರು ನಿಶಾನೆ ತೋರಿಸಿದೆ. ಮಧ್ಯಾಹ್ನ ಹೈಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆ ತಡರಾತ್ರಿ 9.40ಕ್ಕೆ ಸಮನ್ಸ್ಸ್ ಜಾರಿ ಮಾಡಲಾಗಿದೆ.
ಬೆಂಗಳೂರಿನಲ್ಲೇ ವಿಚಾರಣೆ ನಡೆಯುವುದಾಗಿದ್ದರೆ ಈ ಸಮಯವನ್ನು ಸೂಕ್ತ ಎಂದು ಪರಿಭಾವಿಸಬಹುದಿತ್ತು. ಆದರೆ, ದೆಹಲಿಯಲ್ಲಿ ವಿಚಾರಣೆಗೆ ನಿಗದಿ ಮಾಡಿದ್ದು, 8 ಗಂಟೆಗಳ ಕಾಲಾವಕಾಶದಲ್ಲಿ ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಇಡಿ ಸೂಚನೆ ನೀಡಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿವೆ.
ನನ್ನ ಎಲ್ಲಾ ತಂಡ ವಿಚಾರಣೆಗೆ ಹಾಜರಾಗುವುದಾಗಿ ಹೇಳುವುದರ ಜತೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಟ್ವಿಟರ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ಅವರು ಬೆಂಗಳೂರಿನಿಂದ ಪ್ರಯಾಣ ಆರಂಭಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, 11 ಗಂಟೆಗೆ ಪತ್ರಿಕಾಗೋಷ್ಠಿ ಕರೆಯಲಾಗಿದ್ದು, 12ಗಂಟೆ ನಂತರ ದೆಹಲಿಗೆ ತೆರಳಲಿದ್ದಾರೆ. ತಮ್ಮ ಮನೆಯಿಂದ 11 ಗಂಟೆಗೆ ಡಿ.ಕೆ.ಶಿವಕುಮಾರ್ ಹಾಗೂ ಅವರ ಕುಟುಂಬದ ಸದಸ್ಯರು ಹೊರಟು, ಮಧ್ಯಾಹ್ನ 1 ಗಂಟೆಗೆ ತೆರಳಲಿರುವ ಎರಡು ವಿಮಾನಗಳಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಲಾಗಿತ್ತು.
ಈ ನಡುವೆ ಡಿ.ಕೆ.ಶಿವಕುಮಾರ್ ಅವರ ಮನೆಗೆ ಕಾಂಗ್ರೆಸ್ನ ನಾಯಕರು, ಶಾಸಕರು, ಮಾಜಿ ಸಚಿವರು ಸೇರಿದಂತೆ ಹಲವಾರು ಮುಖಂಡರು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.