ಬೆಂಗಳೂರು, ಆ.28-ಮೂರು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಠಿಸಿದ ಬಿಜೆಪಿ ಹೈಕಮಾಂಡ್ ಮೂವರೂ ಡಿಸಿಎಂಗಳಿಗೂ ಝೀರೋ ಟ್ರಾಫಿಕ್ ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದು ಬಿಜೆಪಿ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪೆÇ್ರಟೋಕಾಲïನಂತೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದು, ಉಪ ಮುಖ್ಯಮಂತ್ರಿಗಳಿಗೂ ಝೀರೋ ಟ್ರಾಫಿಕ್ ಸೌಲಭ್ಯ ಕಲ್ಪಿಸಲಾಗುತ್ತದೆ ಎನ್ನುವ ಮಾತುಗಳು ಕೇಳಿಬಂದ ಬೆನ್ನಲ್ಲೇ ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ಝೀರೋ ಟ್ರಾಫಿಕïಗೆ ಬ್ರೇಕ್ ಹಾಕಿದೆ.
ಈ ಹಿಂದೆ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಡಾ.ಜಿ.ಪರಮೇಶ್ವರ್ ಝೀರೋ ಟ್ರಾಫಿಕ್ ಬಳಸಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಸಾರ್ವಜನಿಕರಿಗೆ ಅನಗತ್ಯವಾಗಿ ತೊಂದರೆಯಾಗುತ್ತಿದೆ.ಸಂಚಾರ ದಟ್ಟಣೆ ಸಮಸ್ಯೆ ಸೃಷ್ಠಿಯಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು.ಬಿಜೆಪಿ ಕೂಡ ಡಿಸಿಎಂ ಝೀರೋ ಟ್ರಾಫಿಕ್ ಬಳಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.ಈ ಹಿನ್ನೆಯಲ್ಲಿ ಇದೀಗ ಬಿಜೆಪಿ ಮೇಲೆ ಟೀಕೆ ಬಾರದಿರಲಿ ಎನ್ನುವ ಕಾರಣಕ್ಕೆ ಡಿಸಿಎಂಗಳ ಝೀರೋ ಟ್ರಾಫಿಕïಗೆ ಹೈಕಮಾಂಡ್ ಕಡಿವಾಣ ಹಾಕಿದೆ ಎನ್ನಲಾಗಿದೆ.
ಸದ್ಯ ಯಡಿಯೂರಪ್ಪ ಸರ್ಕಾರದಲ್ಲಿ ಗೋವಿಂದ ಕಾರಜೋಳ, ಡಾ. ಅಶ್ವತ್ಥನಾರಾಯಣ್ ಮತ್ತು ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿಗಳಾಗಿದ್ದು, ಮುಖ್ಯಮಂತ್ರಿಗಳ ಜೊತೆ ಇವರಿಗೂ ಝೀರೋ ಟ್ರಾಫಿಕ್ ಸೌಲಭ್ಯ ಕಲ್ಪಿಸಿದರೆ, ಸಾರ್ವಜನಿಕವಾಗಿ ಭಾರೀ ಟೀಕೆ ಎದುರಿಸಬೇಕಾಗಬಹುದು ಎನ್ನುವ ಮುನ್ನೆಚ್ಚರಿಕೆಯಿಂದ ಬಿಜೆಪಿ ಹೈಕಮಾಂಡ್ ಡಿಸಿಎಂಗಳು ಝೀರೋ ಟ್ರಾಫಿಕ್ ಬಳಸುವಂತಿಲ್ಲ ಎಂದು ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ ಎಂದು ತಿಳಿದು ಬಂದಿದೆ.
ಬಿಜೆಪಿ ಹೈಕಮಾಂಡ್ ಸೂಚನೆಯಿಂದಾಗಿ ಬೆಂಗಳೂರಿನ ಜನತೆ ವಿಶೇಷವಾಗಿ ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿರುವ ನಾಗರಿಕರು ಮತ್ತಷ್ಟು ಸಮಸ್ಯೆ ಎದುರಿಸುವುದರಿಂದ ಪಾರಾಗಿದ್ದಾರೆ.