ಬೆಂಗಳೂರು, ಆ.28- ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಅವರು ಬೆಂಗಳೂರಿನತ್ತ ತಲೆ ಹಾಕದೆ ದೂರ ಉಳಿದಿರುವುದು ಕಾಂಗ್ರೆಸ್ ಸಂಘಟನೆಗೆ ಭಾರೀ ಹಿನ್ನಡೆಯಾದಂತಾಗಿದೆ.
ಒಂದೆಡೆ ವಿರೋಧ ಪಕ್ಷದ ನಾಯಕನ ಆಯ್ಕೆ, ಮತ್ತೊಂದೆಡೆ ಪಕ್ಷದ ಪದಾಧಕಾರಿಗಳ ನೇಮಕಾತಿ ಸೇರಿದಂತೆ ಹಲವಾರು ವಿಷಯಗಳು ನೆನೆಗುದಿಗೆ ಬಿದ್ದಿವೆ. ಹೈಕಮಾಂಡ್ ಮತ್ತು ಕರ್ನಾಟಕ ಕಾಂಗ್ರೆಸ್ಗೆ ಸಂಪರ್ಕ ಸೇತುವೆಯಾಗಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ನಾಪತ್ತೆಯಾಗಿರುವುದು ಸಂಘಟನಾತ್ಮಕ ದೃಷ್ಟಿಯಿಂದ ತೀವ್ರ ಹಿನ್ನಡೆಯಾದಂತಾಗಿದೆ.
ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಿ ಇತರ ರಾಷ್ಟ್ರೀಯ ಮುಖಂಡರನ್ನು ಭೇಟಿ ಮಾಡಿ ಬರುತ್ತಿದ್ದಾರೆ. ಆದರೆ ಸಂಘಟನಾತ್ಮಕ ದೃಷ್ಟಿಯಿಂದ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯವರ ಶಿಫಾರಸು ಅಂತಿಮವಾಗಿರುತ್ತದೆ.
ಸಮ್ಮಿಶ್ರ ಸರ್ಕಾರ ಅಸ್ಥಿತ್ವದಲ್ಲಿರುವವರೆಗೂ ತಿಂಗಳಿಗೆ ಮೂರ್ನಾಲ್ಕು ಬಾರಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದ ವೇಣುಗೋಪಾಲ್ ಅವರು ಸರ್ಕಾರ ಪತನವಾದ ನಂತರ ತಿಂಗಳಾದರೂ ಇತ್ತ ತಲೆ ಹಾಕಿಲ್ಲ.
ವೇಣುಗೋಪಾಲ್ ಅವರು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಅವರನ್ನೇ ಘೋಷಿಸಬೇಕು ಎಂಬ ಆಸಕ್ತಿ ಹೊಂದಿದ್ದು, ಹೈಕಮಾಂಡ್ ಮೇಲೆ ಈ ನಿಟ್ಟಿನಲ್ಲಿ ಒತ್ತಡ ಕೂಡ ಹಾಕಿದ್ದರು.
ರಾಜ್ಯ ಕಾಂಗ್ರೆಸ್ನ ಇತರ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಎಲ್ಲರ ಜತೆ ಚರ್ಚಿಸಿದ ನಂತರವೇ ನಿರ್ಧಾರ ಪ್ರಕಟಿಸುವಂತೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ ವೇಣುಗೋಪಾಲ್ ಇಕ್ಕಟ್ಟಿಗೆ ಸಿಲುಕಿದ್ದು, ಕರ್ನಾಟಕ ರಾಜಕೀಯದಿಂದ ಹೊರ ಉಳಿದಿದ್ದಾರೆ.
ಎಐಸಿಸಿ ಮಟ್ಟದಲ್ಲಿ ಆಡಳಿತಾತ್ಮಕ ಪ್ರಧಾನಕಾರ್ಯದರ್ಶಿಯಾಗಿ ಪ್ರಮುಖ ಜವಾಬ್ದಾರಿ ವಹಿಸಿಕೊಂಡಿರುವ ಕೆ.ಸಿ.ವೇಣುಗೋಪಾಲ್ಗೆ ಕರ್ನಾಟಕದ ಬಗ್ಗೆ ಗಮನ ಹರಿಸಲು ಸಮಯ ಇಲ್ಲ. ಅವರ ಬದಲಿಗೆ ಬೇರೊಬ್ಬ ಪ್ರಧಾನ ಕಾರ್ಯದರ್ಶಿ ನೇಮಿಸುವಂತೆ ಕೆಲವು ಕಾಂಗ್ರೆಸ್ ನಾಯಕರು ಹೈಕಮಾಂಡ್ ಬಳಿ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಗೊಂದಲದಲ್ಲಿ ಮುಳುಗಿದ್ದು , ಯಾವಾಗ ಏನು ಬೇಕಾದರೂ ಬೆಳವಣಿಗೆ ಆಗಬಹುದು. ಮಧ್ಯಂತರ ಚುನಾವಣೆ ಎದುರಾದರೆ ಪಕ್ಷದಲ್ಲಿ ಅದನ್ನು ನಿಭಾಯಿಸಲು ಯಾವುದೇ ತಯಾರಿ ಮಾಡಿಕೊಂಡಿಲ್ಲ. ಪಕ್ಷದ ಪದಾಧಿಕಾರಿಗಳೇ ಈವರೆಗೂ ನೇಮಕವಾಗಿಲ್ಲ. ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ 17 ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲೂ ಕೂಡ ಕಾಂಗ್ರೆಸ್ ಸೋಲು ಕಾಣಬೇಕಾಗುತ್ತದೆ.
ಹೀಗಾಗಿ ಕೂಡಲೇ ಹಿರಿಯ ನಾಯಕರೊಬ್ಬರನ್ನು ಕರ್ನಾಟಕ ಕಾಂಗ್ರೆಸ್ಗೆ ಉಸ್ತುವಾರಿಯನ್ನಾಗಿ ನೇಮಿಸಿ ಎಂದು ಹೈಕಮಾಂಡ್ಗೆ ರಾಜ್ಯದ ಕೆಲ ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದಾರೆ.ವೇಣುಗೋಪಾಲ್ ಅವರ ನಿರಾಸಕ್ತಿಯಿಂದಾಗಿ ಪಕ್ಷ ಸೊರಗುತ್ತಿದ್ದು, ಭವಿಷ್ಯದಲ್ಲಿ ಆತಂಕ ಸೃಷ್ಟಿಯಾಗಿದೆ.