ಬೆಳಗಾವಿ,ಆ.28- ಪ್ರವಾಹ ಸಂತ್ರಸ್ತರ ಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಕೇಂದ್ರ ಸರ್ಕಾರ ಯಾವುದೇ ನೆರವನ್ನು ರಾಜ್ಯಕ್ಕೆ ನೀಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಆಡಳಿತವನ್ನು ಅಮಿತ್ ಶಾ ನಡೆಸುತ್ತಿದ್ದಾರೆ.ಯಡಿಯೂರಪ್ಪ ಕೇವಲ ದೆಹಲಿ ಓಡಾಟ ಮಾಡಿಕೊಂಡಿದ್ದಾರೆ.ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.
ಕೇಂದ್ರ ಸರ್ಕಾರ ಐದು ಸಾವಿರ ಕೋಟಿ ರೂ.ಪ್ರವಾಹ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಅವರು, ರಾಜ್ಯದಿಂದ ಆಯ್ಕೆಯಾದ 25 ಸಂಸದರು ಏನು ಮಾಡುತ್ತಿದ್ದಾರೆ.ಜನರ ಸಮಸ್ಯೆಗೆ ಸ್ಪಂದಿಸಲು ಸರ್ಕಾರಕ್ಕೆ ಆಸಕ್ತಿಯಿಲ್ಲ ಎಂದು ಕಿಡಿಕಾರಿದರು.
ಇಂದಿರಾ ಕ್ಯಾಂಟೀನ್ ಮುಚ್ಚುವ ಪ್ರಯತ್ನವನ್ನು ಸರ್ಕಾರ ಮಾಡಿದರೆ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಲಿದೆ.ಈ ಬಗ್ಗೆ ಬಿಬಿಎಂಪಿ ಆಯುಕ್ತರ ಜೊತೆ ಮಾತನಾಡಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಪತ್ರ ಬರೆದು ಕೂಡಲೇ ಅನುದಾನ ಬಿಡುಗಡೆ ಮಾಡಲು ಮನವಿ ಮಾಡುವುದಾಗಿ ಹೇಳಿದರು.
ಇಂದಿರಾ ಕ್ಯಾಂಟೀನ್ ಮಹತ್ವದ ಯೋಜನೆಯಾಗಿದೆ.ಸಾವಿರಾರು ಜನರ ಹಸಿವು ನೀಗಿಸುವ ಕೆಲಸಕ್ಕೆ ಯಾವ ಸರ್ಕಾರ ಕೂಡ ಅಡ್ಡಿ ಪಡಿಸಬಾರದು ಎಂದರು.