ಬೆಂಗಳೂರು, ಆ.28- ನನಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿರುವುದು ಪಕ್ಷದ ಹೈಕಮಾಂಡ್.ಈ ಹುದ್ದೆ ಬಯಸದೆ ಬಂದ ಭಾಗ್ಯವಾಗಿದೆ.ನನಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಜನ ಸ್ನೇಹಿ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಇಂದಿಲ್ಲಿ ತಿಳಿಸಿದ್ದಾರೆ.
ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾರೂ ವಿರೋಧಿಗಳಿಲ್ಲ. ರಾಜಕೀಯವಾಗಿ ನನ್ನನ್ನು ಮುಗಿಸುವ ಪ್ರಯತ್ನ ಯಾರೂ ಮಾಡಿಲ್ಲ. ಉಮೇಶ್ ಕತ್ತಿ ಮತ್ತು ಜಾರಕಿಹೊಳಿ ಕುಟುಂಬದ ಜತೆ ನನಗೆ ಯಾವುದೇ ಮನಸ್ಥಾಪವಿಲ್ಲ. ಅವರಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದೇನೆ ಎಂದರು.
ಪಕ್ಷದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಹೆಚ್ಚಿರುವುದು ತಪ್ಪಲ್ಲ. ಬಿಜೆಪಿಯಲ್ಲಿ ಎಲ್ಲರೂ ಸಮರ್ಥರಿದ್ದಾರೆ.ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವ ಸಾಮಥ್ರ್ಯವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೂವರು ಉಪ ಮುಖ್ಯಮಂತ್ರಿಗಳು ಝಿರೋ ಟ್ರಾಫಿಕ್ ಪಡೆಯಲ್ಲ. ಮುಖ್ಯಮಂತ್ರಿಗಳು ನನಗೆ ಸಾರಿಗೆ ಇಲಾಖೆ ಜವಾಬ್ದಾರಿ ನೀಡಿದ್ದಾರೆ.ಅದನ್ನು ಸಮರ್ಥವಾಗಿ ನಿಭಾಯಿಸುವುದಾಗಿ ಪುನರುಚ್ಚರಿಸಿದರು.