ಬೆಂಗಳೂರು, ಆ.28- ನಗರದಲ್ಲಿ ಪ್ಲಾಸ್ಟಿಕ್ಅನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೂ ಕೆಲವೆಡೆ ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಇಂದು ದಾಳಿ ನಡೆಸಿದರು.
ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಅಧಿಕಾರಿಗಳು ಸದಾಶಿವನಗರ ಮುಖ್ಯರಸ್ತೆಯಲ್ಲಿರುವ ನೇಚರ್ ಬ್ಯಾಸ್ಕೆಟ್ ಅಂಗಡಿ ಮೇಲೆ ದಾಳಿ ನಡೆಸಿದರು.
ರಾಜ್ಯದಲ್ಲಿ ಒಟ್ಟು 9 ನೇಚರ್ ಬ್ಯಾಸ್ಕೆಟ್ ಶಾಪ್ಗಳಿದ್ದು, ಎಲ್ಲ ಬ್ರಾಂಚ್ಗಳಿಗೂ ಕೂಡಲೇ ನೋಟಿಸ್ ಕಳುಹಿಸುವಂತೆ ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದರು.
ಕೆಲವು ಅಂಗಡಿಗಳು, ಮಳಿಗೆಗಳು, ಅಸಂಘಟಿತ ವಲಯಗಳಲ್ಲಿ ದಾಳಿ ನಡೆಸಲಾಯಿತು.ಕೆಲವು ಅಂಗಡಿಗಳಲ್ಲಿ ಹಣ್ಣುಗಳನ್ನು ಪ್ಲಾಸ್ಟಿಕ್ ಕವರ್ಗಳಲ್ಲಿಟ್ಟು ಕೊಡುತ್ತಿದ್ದುದು ಕಂಡುಬಂದುದರಿಂದ ಅಂತಹ ಅಂಗಡಿ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ.ಸುಧಾಕರ್, ಪ್ಲಾಸ್ಟಿಕ್ ಮಾರಾಟ ಮಾಡುವ, ಉತ್ಪನ್ನ ಮಾಡುವ ಮಳಿಗೆಗಳ ಲೈಸೆನ್ಸ್ ರದ್ದುಪಡಿಸುವ ಅಧಿಕಾರ ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ಇದೆ. ಆದರೆ, ಏಕೆ ಕ್ರಮ ತೆಗೆದುಕೊಂಡಿಲ್ಲ ಎಂಬುದು ಗೊತ್ತಾಗಿಲ್ಲ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಏಕಾಏಕಿ ಮಳಿಗೆಗಳ ಮೇಲೆ ದಾಳಿ ಮಾಡಲಾಗುವುದು.ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಗೂ ಜೀವರಾಶಿಗಳ ಮೇಲೆ ಮಾರಕ ಪರಿಣಾಮ ಉಂಟಾಗುತ್ತದೆ ಎಂದರು.
ಪ್ರತಿದಿನ ಅಂಗಡಿ-ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಬಿಬಿಎಂಪಿ ಜಂಟಿ ಆಯುಕ್ತರಿಗೆ ಸೂಚಿಸುತ್ತೇನೆ. ಅಲ್ಲದೆ ಆಯಾ ವಾರ್ಡ್ಗಳ ಆರೋಗ್ಯಾಧಿಕಾರಿಗಳು ಕೂಡ ಪರಿಶೀಲನೆ ಮಾಡಬೇಕು.ಇಂದಿನಿಂದಲೇ ಇದಕ್ಕೆ ಆದೇಶ ನೀಡಲಾಗುವುದು ಎಂದು ಸುಧಾಕರ್ ತಿಳಿಸಿದರು.