ಬೆಂಗಳೂರು, ಆ.28-ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಂಡವರ ಸಂಕಷ್ಟ ಸ್ಥಿತಿಯನ್ನು ಕಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಣ್ಣೀರು ಹಾಕಿ ಮಮ್ಮಲ ಮರುಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವಾರ ನವದೆಹಲಿಗೆ ತೆರಳಿದ್ದ ಯಡಿಯೂರಪ್ಪ ಅನರ್ಹಗೊಂಡ ಕಾಂಗ್ರೆಸ್-ಜೆಡಿಎಸ್ನ ಕೆಲವು ಶಾಸಕರನ್ನು ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ರಹಸ್ಯವಾಗಿ ಭೇಟಿ ಮಾಡಿದ್ದರು.
ಈ ವೇಳೆ ಅನರ್ಹಗೊಂಡ ರಾಜರಾಜೇಶ್ವರಿ ನಗರದ ಮುನಿರತ್ನ, ಯಶವಂತಪುರದ ಎಸ್.ಟಿ.ಸೋಮಶೇಖರ್, ಕೆ.ಆರ್.ಪುರಂನಭೈರತಿಬಸವರಾಜ್, ಮಹಾಲಕ್ಷ್ಮೀ ಲೇಔಟ್ ಗೋಪಾಲಯ್ಯ, ಕೆ.ಆರ್.ಪೇಟೆಯ ನಾರಾಯಣಗೌಡ, ಹಿರೇಕೆರೂರಿನ ಬಿ.ಸಿ.ಪಾಟೀಲ್, ಗೋಕಾಕ್ನ ರಮೇಶ್ ಜಾರಕಿ ಹೊಳಿ, ಅಥಣಿಯ ಮಹೇಶ್ ಕುಮಟಳ್ಳಿ, ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್, ಮಸ್ಕಿಯ ಪ್ರತಾಪ್ಗೌಡ ಪಾಟೀಲ್ ಸೇರಿದಂತೆ ಮತ್ತಿತರರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅವರ ಪರಿಸ್ಥಿತಿಗೆ ಕಣ್ಣೀರು ಹಾಕಿದ್ದಾರೆ.
ಏನೋ ಮಾಡಲು ಹೋಗಿ ಇನ್ನೇನೋ ಮಾಡಿದರು ಎಂಬಂತಾಗಿದೆ ನಮ್ಮ ಸ್ಥಿತಿ.ಅಂದಿನ ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ನಮ್ಮ ರಾಜೀನಾಮೆ ಪತ್ರ ಅಂಗೀಕರಿಸುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಸರ್ಕಾರ ಪತನವಾದ ನಂತರ ಬಿಜೆಪಿ ಅಧಿಕಾರಕ್ಕೆ ಬಂದರೆ ನಮಗೆ ಹೇಗಿದ್ದರೂ ಸಚಿವಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು.
ಸಚಿವರಾದರೆ ಉಪಚುನಾವಣೆಯನ್ನು ಸುಲಭವಾಗಿ ಗೆಲ್ಲಬಹುದು ಮುಂದಿನ ಮೂರು ವರ್ಷ 10 ತಿಂಗಳು ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಇರಬಹುದೆಂಬ ನಿರೀಕ್ಷೆ ಇತ್ತು. ಆದರೆ ಈಗ ಸಚಿವ ಸ್ಥಾನ ಇರಲಿ, ಶಾಸಕ ಸ್ಥಾನವೂ ಇಲ್ಲ.
ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರೂ ತುರ್ತು ಅರ್ಜಿ ವಿಚಾರಣೆಗೆ ಬರುತ್ತಿಲ್ಲ. ಅತ್ತ ಸಚಿವ ಸ್ಥಾನ ಸಿಗಲಿಲ್ಲ, ಇತ್ತ ಶಾಸಕ ಸ್ಥಾನವೂ ಉಳಿಯಲಿಲ್ಲ. ನಮ್ಮ ಪರಿಸ್ಥಿತಿ ಯಾರಿಗೂ ಬೇಡ ಎಂದು ಬಿ.ಎಸ್.ವೈ ಮುಂದೆ ಅನರ್ಹಗೊಂಡ ಶಾಸಕರು ಗಳಗಳನೆ ಕಣ್ಣೀರು ಹಾಕಿದ್ದಾರೆ.
ಅದರಲ್ಲೂ ರಾಜರಾಜೇಶ್ವರಿ ನಗರದ ಮುನಿರತ್ನ, ನಾನು ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತನಾಗಿದ್ದೆ. ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನವರ ಬಣದಲ್ಲಿ ಗುರುತಿಸಿಕೊಂಡ ಕಾರಣ ನನಗೆ ಸುಲಭವಾಗಿ ಟಿಕೆಟ್ ದಕ್ಕಿತ್ತು. ಕ್ಷೇತ್ರದಲ್ಲಿ ಪ್ರಬಲ ವಿರೋಧ ವಿದ್ದರೂ ಗೆದ್ದು ಬಂದಿದ್ದೆ.
ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಒಂದಿಷ್ಟು ವ್ಯತ್ಯಾಸಗಳಾಗಿದ್ದರೂ ತೀರಾ ನನ್ನನ್ನು ಕಡೆಗಣಿಸಿರಲಿಲ್ಲ. ಸಚಿವ ಸ್ಥಾನ ಸಿಗದಿರುವುದು ಹಾಗೂ ಬೆಂಗಳೂರಿನ ವಿಷಯದಲ್ಲೂ ಅಂದಿನ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಮೂಗು ತೂರಿಸಿದ್ದರಿಂದ ಬಂಡಾಯ ಸಾರಿದೆವು.ಈಗ ನಮಗೆ ಶಾಸಕ ಸ್ಥಾನವೂ ಉಳಿದಿಲ್ಲ. ಮುಂದೆ ಸಚಿವ ಸ್ಥಾನ ಸಿಗುತ್ತದೆ ಎಂಬ ಖಾತ್ರಿಯೂ ಇಲ್ಲ.
ನಮ್ಮ ಕಣ್ಣೀರ ಮೇಲೆ ನೀವು ಸರ್ಕಾರ ರಚಿಸಿದ್ದೀರಿ. ನಮಗೆ ಅನ್ಯಾಯವಾದರೆ ನಿಮ್ಮ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ನಿಮಗಾಗಿ ಶಾಸಕ ಸ್ಥಾನವನ್ನೇ ತ್ಯಾಗ ಮಾಡಿದ್ದೇವೆ. ನಮಗೆ ಮೋಸ ಮಾಡಿದರೆ ನಿಮಗೆ ಒಳ್ಳೆಯದಾಗುವುದಿಲ್ಲ ಎಂದು ಮುನಿರತ್ನ ಬಿಎಸ್ವೈ ಬಳಿ ಕಣ್ಣೀರು ಹಾಕುತ್ತಲೇ ಅಂಗಲಾಚಿದರು.
ನಾವು ಎಷ್ಟು ದಿನ ಅನರ್ಹಗೊಂಡ ಶಾಸಕರೆಂದು ಕರೆಸಿಕೊಳ್ಳಬೇಕು. ಪ್ರತಿದಿನ ನಮಗೆ ಕಾಂಗ್ರೆಸ್-ಜೆಡಿಎಸ್ನವರಿಂದ ಚುಚ್ಚು ಮಾತುಗಳನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ.
ಕ್ಷೇತ್ರದಲ್ಲಿ ಕಾರ್ಯಕರ್ತರು ಕೂಡ ನಮ್ಮ ಜೊತೆ ಸೇರುತ್ತಿಲ್ಲ. ದಿನದಿಂದ ದಿನಕ್ಕೆ ಹೀಗೆ ದೂರ ಸರಿಯುತ್ತಾ ಹೋದರೆ ಉಪಚುನಾವಣೆಯನ್ನು ಎದುರಿಸುವುದಾದರೂ ಹೇಗೆ? ಯಾವ ಕಾರಣಕ್ಕಾಗಿ ನಮಗೆ ಈ ಶಿಕ್ಷೆ ಎಂದು ಮುನಿರತ್ನ ತಮಗೆ ಬಂದಿರುವ ಸಂಕಷ್ಟವನ್ನು ತೋಡಿಕೊಂಡರು.
ಇದರಿಂದ ಭಾವೋದ್ವೇಗಕ್ಕೊಳಗಾದ ಯಡಿಯೂರಪ್ಪ ಶಾಸಕರ ಕಣ್ಣೀರಿನ ಕಥೆ ಕೇಳಿ ಅವರೂ ಕೂಡ ಕಣ್ಣೀರು ಸುರಿಸಿದರು. ನನಗೆ ನಿಮ್ಮನ್ನು ಅನರ್ಹಗೊಳಿಸುತ್ತಾರೆ ಎಂಬ ನಿರೀಕ್ಷೆ ಕನಸು ಮನಸ್ಸಿನಲ್ಲೂ ಇರಲಿಲ್ಲ. ಸ್ಪೀಕರ್ ಇಂತಹ ಐತಿಹಾಸಿಕ ಪ್ರಮಾದ ಮಾಡುತ್ತಾರೆಂದು ಅಂದುಕೊಂಡಿರಲಿಲ್ಲ.
ಕಾಂಗ್ರೆಸ್-ಜೆಡಿಎಸ್ ನಾಯಕರ ಒತ್ತಡಕ್ಕೆ ಮಣಿದು ನಿಮ್ಮನ್ನು ಅನರ್ಹರನ್ನಾಗಿಸಿದ್ದಾರೆ. ನಿಮಗೆ ಎಂತಹ ಸಂದರ್ಭದಲ್ಲೂ ಅನ್ಯಾಯ ವಾಗಲು ಬಿಡುವುದಿಲ್ಲ. ಕಾನೂನು ಹೋರಾಟ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡುತ್ತೇನೆ. ಏನೇ ಆದರೂ ಸರಿಯೇ ನಿಮಗೆ ನ್ಯಾಯ ದೊರಕಿಸಿಕೊಡುತ್ತೇನೆ ಎಂದು ಯಡಿಯೂರಪ್ಪ ಅಭಯ ನೀಡಿದರು.
ಬಳಿಕ ಸುಪ್ರೀಂಕೋರ್ಟ್ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರನ್ನು ಕರೆಯಿಸಿ ಸಾಧ್ಯವಾದರೆ ಮುಂದಿನ ವಾರ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಂತೆ ನ್ಯಾಯಾಧೀಶರಿಗೆ ಮನವಿ ಮಾಡುವಂತೆ ಯಡಿಯೂರಪ್ಪ ಕೋರಿದರು.