ನವದೆಹಲಿ, ಆ.28-ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಭಾರತದಲ್ಲಷ್ಟೇ ಅಲ್ಲ, 12 ದೇಶಗಳಲ್ಲಿ ಆಸ್ತಿ ಹೊಂದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿದೆ.
ಚಿದಂಬರಂ ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ವ್ಯಕ್ತಪಡಿಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಿದಂಬರಂ ಮತ್ತು ಅವರ ಬೆಂಬಲಿಗರು ಸಾಕ್ಷ್ಯ ನಾಶಪಡಿಸುವ ಪ್ರಯತ್ನ ನಡೆಸಿದ್ದಾರೆ.
ವಿದೇಶಗಳಲ್ಲಿರುವ ವಿವಿಧ ಆಸ್ತಿಗಳನ್ನು ಮಾರಾಟ ಮಾಡಲು ವಿದೇಶಿ ಬ್ಯಾಂಕ್ಗಳ ಖಾತೆಗಳನ್ನು ಮುಕ್ತಾಯಗೊಳಿಸುವುದು ಸೇರಿದಂತೆ ಹಲವಾರು ರೀತಿಯ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ. ಅರ್ಜೆಂಟೈನಾ, ಆಸ್ಟ್ರಿಯಾ, ಬ್ರಿಟಿಷ್ ವರ್ಜಿನ್ ಐಲ್ಯಾಂಡ್, ಫ್ರಾನ್ಸ್, ಗ್ರೀಸ್, ಮಲೇಷಿಯಾ, ಮೊನಾಕೊ, ಫಿಲಿಫೈನ್ಸ್, ಸಿಂಗಾಪುರ್, ಸೌತ್ ಆಫ್ರಿಕಾ, ಸ್ಪೇನ್, ಶ್ರೀಲಂಕಾ ಸೇರಿದಂತೆ 12 ದೇಶಗಳಲ್ಲಿ ಚಿದಂಬರಂ ಆಸ್ತಿ ಹೊಂದಿದ್ದಾರೆ.
ಶೆಲ್ ಕಂಪನಿ ಮೂಲಕ ವಿವಿಧ ದೇಶಗಳಲ್ಲಿ ಚಿದಂಬರಂ ಹಾಗೂ ಅವರ ಸಂಗಡಿಗರು ಹೂಡಿಕೆ ಮಾಡಿದ್ದಾರೆ. ಲಂಚಪಡೆದು ಆರು ಕಂಪನಿಗಳಿಗೆ ಎಫ್ಐಪಿಟಿಯನ್ನು ಅಧಿಕಾರದಲ್ಲಿದ್ದಾಗ ಅನಧಿಕೃತವಾಗಿ ಮಂಜೂರು ಮಾಡಿದ್ದಾರೆ.
ಲಂಚವಾಗಿ ಪಡೆದ ಹಣವನ್ನು ಚಿರ ಹಾಗೂ ಚರಾಸ್ತಿಗಳ ಮೇಲೆ ದೇಶ ಹಾಗೂ ವಿದೇಶಗಳಲ್ಲಿ ಹೂಡಿಕೆ ಮಾಡಲಾಗಿದೆ.
ಚಿದಂಬರಂ ಅವರ ಪುತ್ರ ಕಾರ್ತಿ ಹೆಸರಿನಲ್ಲಿ ಹೂಡಿಕೆಯಾಗಿದ್ದು, ಕೆಲವು ಕಂಪನಿಗಳು ಬೇನಾಮಿ ಹೆಸರಿನಲ್ಲಿ ಸ್ಥಾಪನೆಯಾಗಿವೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಕಳೆದ ಆಗಸ್ಟ್21 ರಂದು ಚಿದಂಬರಂ ಅವರನ್ನು ಸಿಬಿಐ ರಾತ್ರೋರಾತ್ರಿ ಬಂಧಿಸಿತ್ತು. ಆರಂಭದಲ್ಲಿ ಐದು ದಿನಗಳ ಕಾಲ ಸಿಬಿಐ ವಿಚಾರಣೆ ನಡೆಸಿದ್ದು, ನಂತರ ಜಾರಿನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.
ದೆಹಲಿ ಹೈಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿತ್ತು. ನಂತರ ಚಿದಂಬರಂ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.