ಕೇಂದ್ರ ಸರ್ಕಾರದಿಂದ 370ನೇ ಅನುಚ್ಛೇದ ರದ್ದು-ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ-ಪಂಚ ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವರ್ಗಾವಣೆ
ನವದೆಹಲಿ, ಆ.28- ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಭಾರತೀಯ ಸಂವಿಧಾನದ 370ನೇ ಅನುಚ್ಛೇದ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರಿಂ ಕೋರ್ಟ್ ಇಂದು ಪಂಚ ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವರ್ಗಾವಣೆ ಮಾಡಿದೆ.
ಅಲ್ಲದೆ ಈ ಸಂಬಂಧ ಕೇಂದ್ರ ಸರ್ಕಾರ ಹಾಗೂ ಜಮ್ಮು ಮತ್ತು ಕಾಶ್ಮೀರ ಪ್ರಾಂತೀಯ ಆಡಳಿತಕ್ಕೆ ಜಾರಿಗೊಳಿಸಿ ಪ್ರತ್ಯುತ್ತರ ಕೇಳಿದೆ.
370ನೇ ವಿಧಿ ರದ್ದು, ಕಾಶ್ಮೀರದ ರಾಜಕೀಯ ನಾಯಕರ ಬಂಧನ, ಕಣಿವೆ ಪ್ರಾಂತ್ಯದಲ್ಲಿ ಜನರ ಹಕ್ಕು ಉಲ್ಲಂಘನೆ ಸೇರಿದಂತೆ ಸಲ್ಲಿಕೆಯಾಗಿರುವ ಸುಮಾರು ಹತ್ತು ಅರ್ಜಿಗಳ ಕುರಿತು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ಇಂದು ವಿಚಾರಣೆ ನಡೆಸಿತು.
ಇದು ಅತ್ಯಂತ ಪ್ರಮುಖ ವಿಚಾರ ಈ ಸಂಬಂಧ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳ ವಿಚಾರಣೆಯನ್ನು ಪಂಚ ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸುವುದಾಗಿ ಮುಖ್ಯನ್ಯಾಯಾಮೂರ್ತಿ ತಿಳಿಸಿದರು.
ಅಲ್ಲದೆ ಈ ಸಂಬಂಧ ಕೇಂದ್ರ ಸರ್ಕಾರ ಹಾಗೂ ಜಮ್ಮು ಕಾಶ್ಮೀರ ಆಡಳಿತದ ಉಸ್ತುವಾರಿ ವಹಿಸಿರುವ ರಾಜ್ಯಪಾಲರಿಗೆ ನೋಟಿಸ್ಗಳನ್ನು ಜಾರಿಗೊಳಿಸಿ ಪ್ರತ್ಯುತ್ತರ ಕೇಳಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಗೆ ಅಸಂವಿಧಾನಿಕ ಎಂದು ವಾದಿಸಿ ಕೆಲವು ಅರ್ಜಿ ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿದ್ದರೆ. ಇನ್ನೂ ಕೆಲವು ಮನವಿ ಅರ್ಜಿಗಳಲ್ಲಿ ಅಲ್ಲಿನ ವಿವಿಧ ರಾಜಕೀಯ ನಾಯಕರ ಬಂಧನ, ನಿರ್ಬಂಧ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಪ್ರಸ್ತಾಪಿಸಲಾಗಿದೆ.
ಸಿಪಿಐ(ಎಂ) ನಾಯಕ ಸೀತಾರಾಮ್ ಯಚೂರಿ, ಸಾಮಾಜಿಕ ಕಾರ್ಯಕರ್ತರಾದ ತಹ್ಸೀನ್ ಪುಣಾವಾಲಾ, ಎನ್ಸಿಪಿ ನಾಯಕ ಮಹಮದ್ ಅಕ್ಬರ್ ಲೋನ್ ಸೇರಿದಂತೆ ಒಟ್ಟು ಹತ್ತು ಅರ್ಜಿದಾರರು ಈ ಸಂಬಂಧ ಸುಪ್ರೀಂ ಕೋರ್ಟ್ ಮನವಿ ಸಲ್ಲಿಸಿದ್ದಾರೆ.