ಬೆಂಗಳೂರು, ಆ.27-ನೆರೆ ಹಾಗೂ ಪ್ರವಾಹಕ್ಕೆ ತುತ್ತಾದ ರಾಜ್ಯದ 22 ಜಿಲ್ಲೆಗಳಲ್ಲಿ ಸುಮಾರು 33 ಸಾವಿರ ಕೋಟಿಗಳಷ್ಟು ನಷ್ಟ ಸಂಭವಿಸಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ಭಾಸ್ಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಷ್ಟದ ಒಟ್ಟು ಅಂದಾಜಿನ ಬಗ್ಗೆ ಎಲ್ಲಾ ಜಿಲ್ಲೆಗಳಿಂದ ಮಾಹಿತಿ ಪಡೆಯಲಾಗುತ್ತಿದೆ. ಈಗಾಗಲೇ ಶೇ.95ರಷ್ಟು ಮಾಹಿತಿ ಸಂಗ್ರಹವಾಗಿದೆ.ಸಂಪೂರ್ಣ ವರದಿ ತಯಾರಾದ ಬಳಿಕ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸಾಮಾನ್ಯವಾಗಿ ರಾಜ್ಯಸರ್ಕಾರ ನಷ್ಟದ ಅಂದಾಜು ಮಾಡಿ ವರದಿ ಸಲ್ಲಿಸಿದ ಬಳಿಕ ಕೇಂದ್ರದಿಂದ ಅಧ್ಯಯನ ತಂಡ ಬರುವುದು ವಾಡಿಕೆ. ಆದರೆ ಈ ಬಾರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಕೇಂದ್ರ ಗೃಹ ಸಚಿವರಲ್ಲಿ ಮನವಿ ಮಾಡಿಕೊಂಡ ಪ್ರಯುಕ್ತ ಬಹಳ ಮುಂಚಿತವಾಗಿಯೇ ಕೇಂದ್ರ ಅಧ್ಯಯನ ತಂಡ ಬಂದಿದೆ. ಈಗಾಗಲೇ ಎರಡು ಜಿಲ್ಲೆಗಳಲ್ಲಿ ಅಧ್ಯಯನ ಮುಗಿಸಿರುವ ತಂಡ, ಇಂದು ಮಡಿಕೇರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದೆ. ಸಂಜೆ ಬೆಂಗಳೂರಿನಲ್ಲಿ ತಂಡದ ಜೊತೆ ಸಭೆ ಆಯೋಜಿಸಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಬರ ನಿರ್ವಹಣೆಗಾಗಿ ಬಿಡುಗಡೆ ಮಾಡಿರುವ ಅನುದಾನವನ್ನು ನೆರೆ ಪರಿಹಾರ ಕಾರ್ಯಗಳಿಗೆ ಬಳಸಲು ಅವಕಾಶ ಇಲ್ಲ. ಕೇಂದ್ರ ಅಧ್ಯಯನ ತಂಡ ವರದಿ ನೀಡಿದ ಬಳಿಕ ಕೇಂದ್ರ ಸರ್ಕಾರ ನೀಡುವ ಪರಿಹಾರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಸದ್ಯಕ್ಕೆ ಸ್ಥಳೀಯ ಸಂಪನ್ಮೂಲಗಳನ್ನೇ ಕ್ರೋಢೀಕರಿಸಿಕೊಂಡು ನೆರೆ ಸಂತ್ರಸ್ಥರಿಗೆ ನೆರವು ನೀಡಲಾಗುತ್ತಿದೆ. 10 ಸಾವಿರ ರೂ. ಪ್ರತಿ ಕುಟುಂಬಕ್ಕೆ ಎಕ್ಸ್ಗ್ರೇಷಿಯಾ ನೀಡಲಾಗುತ್ತಿದ್ದು, ಗಂಜಿ ಕೇಂದ್ರಗಳಿಂದ ಸ್ವಂತ ಮನೆಗೆ ತೆರಳುವವರಿಗೆ 10 ಕೆಜಿ ಅಕ್ಕಿ, ಒಂದು ಕೆಜಿ ಬೇಳೆ, ಐದು ಲೀಟರ್ ಸೀಮೆಎಣ್ಣೆ, ಉಪ್ಪು, ಸಕ್ಕರೆ ಸೇರಿದಂತೆ ಆಹಾರದ ಕಿಟ್ನ್ನು ವಿತರಣೆ ಮಾಡಲಾಗುತ್ತಿದೆ.
ಸಂಪೂರ್ಣ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ., ಭಾಗಶಃ ಮನೆ ಕಳೆದುಕೊಂಡವರಿಗೆ 1 ಲಕ್ಷರೂ. ಪರಿಹಾರ ನೀಡಲಾಗುತ್ತಿದೆ. ಗಂಜಿ ಕೇಂದ್ರಗಳಲ್ಲಿರುವವರು ಬಾಡಿಗೆ ಮನೆ ಮಾಡಿಕೊಂಡು ಹೋಗುವುದಾದರೆ ಅವರಿಗೆ ತಿಂಗಳಿಗೆ 5 ಸಾವಿರ ರೂ. ನೀಡಲಾಗುವುದು. ಒಂದು ವೇಳೆ ಅವರು ಸರ್ಕಾರದ ಆಶ್ರಯವನ್ನೇ ಬಯಸುವುದಾದರೆ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿಕೊಡಲಾಗುವುದು. ಸಮುದಾಯಭವನ, ಕಲ್ಯಾಣಮಂಟಪ ಹಾಗೂ ಇತರೆ ಸ್ಥಳಗಳಲ್ಲಿ ಆಶ್ರಯ ತಾಣಗಳನ್ನು ಕಲ್ಪಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸ್ಥಳೀಯವಾಗಿ ಕೈಗಾರಿಕೋದ್ಯಮಿಗಳೇ ಸಂಘಟನೆಯೊಂದನ್ನು ಸ್ಥಾಪಿಸಿಕೊಳ್ಳುವಂತೆ ಈಗಾಗಲೇ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಈ ರೀತಿಯ ಸಂಘವೊಂದನ್ನು ಸ್ಥಾಪಿಸಿಕೊಳ್ಳಲಾಗಿದ್ದು, ಅವರು ತಮ್ಮದೇ ಆದ ಹಣದಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತಿದ್ದಾರೆ. ಪೀಣ್ಯ ಕೈಗಾರಿಕಾ ಪ್ರದೇಶದ ಉದ್ಯಮಿಗಳು ಸಂಘ ಸ್ಥಾಪಿಸಿಕೊಂಡರೆ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ತಿಳಿಸಿದರು.