ನವದೆಹಲಿ,ಆ.27- ಬಹುಕೋಟಿ ರೂ.ಗಳ ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಹಗರಣದಲ್ಲಿ ತೀವ್ರ ಕಾನೂನು ಇಕ್ಕಟ್ಟಿಗೆ ಸಿಲುಕಿರುವ ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಧುರೀಣ ಪಿ.ಚಿದಂಬರಂ ಅವರ ಪರ ಮತ್ತು ವಿರುದ್ಧ ಕಾನೂನು ಸಮರ ಮುಂದುವರೆದಿದೆ.
ಆಗಸ್ಟ್ 30ರ ವರೆಗೆ ಸಿಬಿಐ ಕಸ್ಟಡಿಗೆ ಒಳಪಟ್ಟಿರುವ ಚಿದಂಬರಂ ಅವರನ್ನು ಸತ್ಯಾಶೋಧನಾ ಪರೀಕ್ಷೆ(ಲೈ ಡಿಟೆಕ್ಟರ್ ಟೆಸ್ಟ್ ಅಥವಾ ಸಿಂಧು ಪತ್ತೆ ಸಾಧನದಿಂದ ಪರೀಕ್ಷೆ)ಗೆ ಒಳಪಡಿಸುವಂತೆ ತನಿಖಾ ಸಂಸ್ಥೆ ನ್ಯಾಯಾಲಯವನ್ನು ಕೋರುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಿಚಾರಣೆ ಸಂದರ್ಭದಲ್ಲಿ ಚಿದಂಬರಂ ಸರಿಯಾಗಿ ಸಹಕರಿಸುತ್ತಿಲ್ಲ, ಪ್ರಶ್ನೆಗಳಿಗೆ ಸಮಪರ್ಕವಾಗಿ ಉತ್ತರಿಸುತ್ತಿಲ್ಲ ಅಲ್ಲದೆ ಈ ಪ್ರಕರಣದ ಮತ್ತೊಬ್ಬ ಆರೋಪಿಯಾಗಿರುವ ಇಂದರಾಣಿ ಮುಖರ್ಜಿ ಅವರಿಗೆ ಸಂಬಂಧಪಟ್ಟ ವಿಷಯದ ಬಗ್ಗೆ ನೀಡಿರುವ ಉತ್ತರ ತಾಳೆಯಾಗುತ್ತಿಲ್ಲ, ಈ ಎಲ್ಲ ಕಾರಣಗಳಿಂದ ಕೇಂದ್ರದ ಮಾಜಿ ಸಚಿವರನ್ನು ಸತ್ಯಶೋಧನಾ ಪರೀಕ್ಷೆಗೆ ಒಳಪಡಿಸುವುದು ಸಿಬಿಐನ ಉದ್ದೇಶವಾಗಿದೆ.
ಅಲ್ಲದೆ ವಿರೋಧಾಭಾಸ ಹೇಳಿಕೆಗಳನ್ನು ನೀಡುತ್ತಿರುವ ಚಿದಂಬರಂ ಮತ್ತು ಇಂದರಾಣಿಯವರನ್ನು ಪರಸ್ಪರ ಮುಖಾಮುಖಿಯಾಗಿಸಲು ಮತ್ತು ಅವರಿಬ್ಬರನ್ನೂ ಒಳಗೊಂಡಂತೆ ಮತ್ತಷ್ಟು ಪ್ರಶ್ನೆಗಳನ್ನು ಕೇಳಲು ಸಿಬಿಐ ನ್ಯಾಯಾಲಯದ ಅನುಮತಿ ಕೋರುವ ನಿರೀಕ್ಷೆಯಿದೆ.
ಈ ಮಧ್ಯೆ ಚಿದಂಬರಂ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಇಂದು ಕೂಡ ಮುಂದುವರೆಯಿತು. ಚಿದು ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ಕಪಿಲ್ ಸಿಬಲ್ ವಾದ ಮಂಡಿಸಿದರು.
ಜಾರಿ ನಿರ್ದೇಶನಾಲಯ ಈಗಾಗಲೇ ತಮ್ಮ ಕಕ್ಷಿದಾರ ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಮೂರು ನಿರ್ದಿಷ್ಟ ದಿನಾಂಕಗಳಂದು ನಡೆದ ವಿಚಾರಣೆಗಳ ವಿವರವನ್ನು ತಮಗೆ ನೀಡಬೇಕೆಂದು ಕಪಿಲ್ ಸಿಬಲ್ ನ್ಯಾಯಾಮೂರ್ತಿಗಳಾದ ಆರ್.ಭಾನುಮತಿ ಮತ್ತು ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ಪೀಠಕ್ಕೆ ಮನವಿ ಸಲ್ಲಿಸಿದ್ದಾರೆ.
ಚಿದು ಪರ ಇಂದು ವಾದ ಮಂಡಿಸಿದ ಎ.ಎಂ.ಸಿಂಘ್ವಿ ಐಎನ್ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಾಖಲಿಸಿರುವ ಪ್ರಕರಣಗಳಿಗೂ ಮತ್ತು ಈ ಹಿಂದೆ ನಡೆದ ವ್ಯವಹಾರಗಳಿಗೂ ಸಂಬಂಧವೆಯಿಲ್ಲ. ಪಿಎಂಎಲ್ಎ ಕಾಯಿದೆಯ ಕೆಲವು ಸೆಕ್ಷನ್ಗಳನ್ನು ಹೊಸದಾಗಿ ಸೇರಿಸಲಾಗಿದೆ. ಆದರೆ ಐಎನ್ಎಕ್ಸ್ ಮೀಡಿಯಾ ವ್ಯವಹಾರ ಸಂದರ್ಭದಲ್ಲಿ ಈ ಸೆಕ್ಷನ್ಗಳಲ್ಲಿರುವ ಯಾವುದೇ ಅಪರಾಧ ಕೃತ್ಯಗಳು ನಡೆದಿಲ್ಲ ಎಂದು ಸಿಂಘ್ವಿ ವಾದಿಸಿದರು.