ಬೆಂಗಳೂರು,ಆ.27-ನನಗೆ ಕೊಡುವುದಿದ್ದರೆ ಪ್ರಬಲ ಖಾತೆಯನ್ನು ನೀಡಿ. ಇಲ್ಲದಿದ್ದರೆ ಈಗಿರುವ ಖಾತೆಯನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಶಾಸಕನಾಗಿ ಪಕ್ಷದಲ್ಲಿ ಮುಂದುವರೆಯುತ್ತೇನೆ. ನನಗೆ ಈ ಖಾತೆ ಬೇಡವೇ ಬೇಡ….. ಇದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ನೀಡಿರುವ ನೇರ ಸಂದೇಶ.
ಅತ್ಯಂತ ಪ್ರಬಲ ಖಾತೆ ಮೇಲೆ ಕಣ್ಣಿಟ್ಟಿದ್ದ ಶ್ರೀರಾಮುಲುಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ಸಿಎಂ ಬಿಎಸ್ವೈ ನೀಡಿದ್ದರು. ಇದರಿಂದ ಬೇಸರಗೊಂಡ ಅವರು ಬೆಳ್ಳಂಬೆಳಗ್ಗೆಯೇ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ದವಳಗಿರಿ ನಿವಾಸಕ್ಕೆ ದೌಡಾಯಿಸಿದರು.
ನಾನು ಈ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ಪುನಃ ಅದೇ ಖಾತೆಯನ್ನು ನಿಭಾಯಿಸಲು ಸಾಧ್ಯವಿಲ್ಲ. ಅಲ್ಲದೆ, ನಾನು ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂಬ ಬೇಡಿಕೆ ಇಟ್ಟಿದ್ದೆ. ಕಡೇ ಪಕ್ಷ ನನ್ನ ಸಾಮಥ್ರ್ಯಕ್ಕೆ ಅನುಗುಣವಾಗಿ ಖಾತೆ ನೀಡಿಲ್ಲ ಎಂದು ಬೇಸರ ಹೊರ ಹಾಕಿದರು.
ನನಗಿಂತಲೂ ಕಿರಿಯರಿಗೆ ಡಿಸಿಎಂ ಸ್ಥಾನ ನೀಡಿದ್ದೀರಿ. ಅಲ್ಲದೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಪರಾಭವಗೊಂಡಿರುವ ಲಕ್ಷ್ಮಣ್ ಸವದಿಗೆ ಸಾರಿಗೆ ಖಾತೆ ಜೊತೆಗೆ ಡಿಸಿಎಂ ಪಟ್ಟವನ್ನೂ ಧಾರೆಯೆರೆದಿದ್ದೀರಿ. ನಾವೇನು ಪಕ್ಷಕ್ಕೆ ದುಡಿದಿಲ್ಲವೇ ಎಂದು ರಾಮುಲು ಬಿಎಸ್ವೈ ಬಳಿ ಅಸಮಾಧಾನ ಹೊರಹಾಕಿದರು.
ನನಗೆ ನಿಮ್ಮಿಂದ ನ್ಯಾಯ ಸಿಗುತ್ತದೆ ಎಂಬ ಭರವಸೆ ಇತ್ತು. ನನ್ನ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸುತ್ತೀರಿ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆ. ಕೊಟ್ಟಿರುವ ಖಾತೆ ಬೇರೆಯೊಬ್ಬರಿಗೆ ನೀಡಿ ನನಗೆ ಬೇರೊಂದು ಸ್ಥಾನ ಕೊಡಬೇಕೆಂದು ಮನವಿ ಮಾಡಿದರು.
ಶ್ರೀರಾಮುಲು ಅವರ ಮನವಿಯನ್ನು ಸಹನೆಯಿಂದಲೇ ಆಲಿಸಿದ ಬಿಎಸ್ವೈ ಇದರಲ್ಲಿ ನನ್ನದೇನು ಪಾತ್ರವಿಲ್ಲ. ಎಲ್ಲವೂ ವರಿಷ್ಠರ ಸೂಚನೆಯಂತೆ ಮಾಡಿದ್ದೇನೆ. ನಿಮಗೆ ಡಿಸಿಎಂ ಸ್ಥಾನ ಕೊಡಬೇಕೆಂಬ ಒಲವು ಇತ್ತು.
ಆದರೆ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ನಾರಾಯಣ ಹಾಗೂ ಲಕ್ಷ್ಮಣ್ ಸವದಿಗೆ ಕೊಡಬೇಕೆಂದು ಕೇಂದ್ರವರಿಷ್ಠರು ಸೂಚನೆ ನೀಡಿದ ಕಾರಣ ಅವರ ಆದೇಶವನ್ನು ಪಾಲಿಸಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದಾಗಲಿದೆ. ಆತುರದಲ್ಲಿ ಕೆಟ್ಟ ನಿರ್ಧಾರ ಕೈಗೊಳ್ಳಬೇಡಿ.ಭವಿಷ್ಯದಲ್ಲಿ ನಿಮಗೆ ಒಳ್ಳೆಯದಾಗುತ್ತದೆ ಎಂದು ಕಿವಿಮಾತು ಹೇಳಿದರು.
ಆದರೆ ಬಿಎಸ್ವೈ ಮಾತನ್ನು ಕೇಳಿಕೊಂಡು ಅಸಮಾಧಾನದಿಂದಲೇ ದವಳಗಿರಿಯಿಂದ ನಿರ್ಗಮಿಸಿದರು.