ಶಹಜಾನಪುರ, ಆ.27- ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 24 ಮೃತ್ಯಕೂಪವಾಗಿ ಪರಿಣಮಿಸಿದ್ದು, ದಿನನಿತ್ಯ ಅಪಘಾತಗಳಿಂದ ಸಾವು-ನೋವು ಸಂಭವಿಸುತ್ತಲ್ಲೇ ಇದೆ.
ಶಹಜಾನಪುರನ ಜಮ್ಕಾ ಕ್ರಾಸಿಂಗ್ ಬಳಿ ಇಂದು ಬೆಳಗ್ಗೆ ಮೂರು ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 16ಮಂದಿ ಮೃತಪಟ್ಟಿದ್ದಾರೆ.
ಈ ದುರ್ಘಟನೆಯಲ್ಲಿ ಐವರು ತೀವ್ರ ಗಾಯಗೊಂಡಿದ್ದು, ಮೂವರ ಸ್ಥಿತಿ ಶೋಚನೀಯವಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ತ್ರಿಪಾಠಿ ತಿಳಿಸಿದ್ದಾರೆ.
ಅತೀವೇಗದ ಟ್ರಕ್ ಮೊದಲು ಟೆಂಪೊಗೆ ಡಿಕ್ಕಿ ಹೊಡೆದು ನಂತರ ವ್ಯಾನ್ಗೆ ಅಪ್ಪಳಿಸಿತು. ಈ ಅಪಘಾತದ ತೀವ್ರತೆಗೆ ಉರುಳಿ ಬಿದ್ದ ವ್ಯಾನ್ ಮೇಲೆ ಟ್ರಕ್ ಮುಗುಚಿ ಬಿತ್ತು ಎಂದು ತ್ರಿಪಾಠಿ ಘಟನೆ ಬಗ್ಗೆ ವಿವರಿಸಿದ್ದಾರೆ.
ಈ ಭೀಕರ ದುರ್ಘಟನೆಯಲ್ಲಿ ವ್ಯಾನ್ನಲ್ಲಿದ್ದ ಓರ್ವ ಮಹಿಳೆ ಮತ್ತು ಮೂವರು ಮಕ್ಕಳು ಸೇರಿದಂತೆ ಸ್ಥಳದಲ್ಲೇ ಮೃತಪಟ್ಟರು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು, ಮೂವರು ಸ್ಥಿತಿ ಗಂಭೀರವಾಗಿದೆ.
ಅಪಘಾತದ ಬಗ್ಗೆ ದಿಗ್ಬ್ರಮೆ ವ್ಯಕ್ತಪಡಿಸಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರಿಗೆ ಸಂತಾಪ ಸೂಚಿಸಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.
ಮರಕ್ಕೆ ಬೈಕ್ ಡಿಕ್ಕಿ: ಇಬ್ಬರ ಸಾವು
ಉತ್ತರಪ್ರದೇಶದ ಶ್ಯಾಮ್ಲಿ ಜಿಲ್ಲೆಯ ಜಿನ್ಜಹನಾ ಪೊಲೀಸ್ ಠಾಣೆಯ ವ್ಯಾಪ್ತಿಯ ಜೋಸ್ನಾ ಗ್ರಾಮದ ಬಳಿ ನಿನ್ನೆ ರಾತ್ರಿ ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಬಿಜೇಂದ್ರರ್(30) ಮತ್ತು ತೇಜಪಾಲ್(28) ಮೃತಪಟ್ಟ ದುರ್ದೈವಿಗಳು.