ಬೆಂಗಳೂರು, ಆ.27-ಅಂತೂ ಇಂತೂ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ತುರ್ತಾಗಿ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದ್ದು, ಈ ಮೂಲಕ ಆತಂಕದಲ್ಲಿದ್ದ ಅನರ್ಹ ಶಾಸಕರು ಕೊಂಚ ನಿರಾಳರಾದಂತಾಗಿದೆ.
ಸ್ಪೀಕರ್ ಅವರ ಅನರ್ಹತೆ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಅನರ್ಹ ಶಾಸಕರು ತುರ್ತು ವಿಚಾರಣೆಗೆ ಕೋರಿ ಸಲ್ಲಿಸಿದ್ದ ಮನವಿಗೆ 20 ದಿನಗಳ ನಂತರ ಮುಖ್ಯ ನ್ಯಾಯಾಧೀಶರು ವಿಚಾರಣೆಗೆ ಸಮ್ಮತಿಸಿ ರಿಜಿಸ್ಟ್ರಾರ್ಗೆ ಪಟ್ಟಿ ಮಾಡುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ರಮಣ್, ಅಜಯ್ ರಸ್ತೋಗಿ, ಮೋಹನ್ ಶಾಂತನಗೌಡರ್ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಶೀಘ್ರವೇ ಬರಲಿದೆ.
ಒಂದು ತಿಂಗಳ ಹಿಂದೆ ಪಕ್ಷೇತರ ಶಾಸಕ ಆರ್.ಶಂಕರ್ ಸೇರಿದಂತೆ ಜೆಡಿಎಸ್ನ ಮೂವರು, ಕಾಂಗ್ರೆಸ್ನ 13 ಶಾಸಕರು ಸೇರಿ ಒಟ್ಟು 17 ಮಂದಿ ಶಾಸಕರನ್ನು ಸ್ಪೀಕರ್ರಮೇಶ್ಕುಮಾರ್ ಅನರ್ಹಗೊಳಿಸಿದ್ದರು.
ಸ್ಪೀಕರ್ ಅವರ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಅನರ್ಹ ಶಾಸಕರು ತುರ್ತು ವಿಚಾರಣೆಗೆ ಮಾಡಿದ್ದ ಮನವಿಯನ್ನು ಮಾನ್ಯ ಮಾಡಿರಲಿಲ್ಲ. ನಿನ್ನೆ ಕೂಡ ನ್ಯಾಯಮೂರ್ತಿ ಅರುಣ್ ಅವರ ಮುಂದೆ ಅನರ್ಹ ಶಾಸಕರು ತುರ್ತು ವಿಚಾರಣೆಗೆ ಮಾಡಿದ್ದ ಮನವಿಯನ್ನು ನ್ಯಾಯಾಲಯ ನಿರಾಕರಿಸಿತ್ತು.
ಇವರ ಪರ ವಕೀಲರಾದ ಮುಕುಲ್ರೋಹ್ಟಗಿ ಇಂದು ಮುಖ್ಯ ನ್ಯಾಯಾಧೀಶರ ಮುಂದೆ ಮನವಿ ಮಾಡಿದ್ದು, ತುರ್ತು ವಿಚಾರಣೆಗೆ ಸಮ್ಮತಿ ಸೂಚಿಸಲಾಗಿದೆ.
ವಿಚಾರಣೆಗೆ ಸಮ್ಮತಿ ದೊರೆಯುತ್ತಿದ್ದಂತೆ ಇತ್ತ ಅನರ್ಹ ಶಾಸಕರ ವಲಯದಲ್ಲಿ ಸಂತಸ ಮನೆ ಮಾಡಿದೆ.
ಸ್ಪೀಕರ್ ಅವರ ಆದೇಶಕ್ಕೆ ತಡೆ ದೊರೆತರೆ ಪ್ರಸ್ತುತ ಸರ್ಕಾರದಲ್ಲಿ ಮಂತ್ರಿಗಳಾಗುವ ಭಾಗ್ಯ ದೊರೆಯಲಿದೆ ಎಂಬ ಲೆಕ್ಕಾಚಾರ ಅನರ್ಹ ಶಾಸಕರದ್ದಾಗಿದೆ. ಈಗಾಗಲೇ ಅನರ್ಹ ಶಾಸಕರೆಲ್ಲರಿಗೂ ಸಚಿವ ಸ್ಥಾನ ನೀಡಬೇಕು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.
ಇವರ ರಾಜೀನಾಮೆಯಿಂದಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಅವಕಾಶವಾಯಿತು. ಹಾಗಾಗಿ ಇವರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕೆಂದು ಖಾತೆಗಳನ್ನು ಖಾಲಿ ಉಳಿಸಿಕೊಂಡಿದ್ದಾರಲ್ಲದೆ, ಕಾನೂನು ಹೋರಾಟದ ನೆರವೂ ಕೂಡ ನೀಡುತ್ತಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಎಷ್ಟು ದಿನ ನಡೆಯುತ್ತದೆ, ತೀರ್ಪು ಯಾವ ರೀತಿ ಬರುತ್ತದೆ ಎಂಬುದರ ಮೇಲೆ ಎಲ್ಲಾ ಅವಲಂಬಿತವಾಗಿದೆ.