ಬೆಂಗಳೂರು,ಆ.27-ಸಾಕಷ್ಟು ಅಳೆದು, ತೂಗಿ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುತ್ತಿದ್ದಂತೆ ನಿರೀಕ್ಷಿತ ಸ್ಥಾನಮಾನ ಸಿಗದಿರುವ ಕಾರಣ ಬಿಜೆಪಿಯಲ್ಲಿ ಭಿನ್ನಮತ ಬೂದಿಮುಚ್ಚಿದ ಕೆಂಡದಂತಿದ್ದು, ಯಾವುದೇ ಕ್ಷಣದಲ್ಲೂ ಸ್ಫೋಟಕ ಲಕ್ಷಣಗಳು ಗೋಚರಿಸುತ್ತಿವೆ.
ಹಿರಿಯರನ್ನು ಕಡೆಗಣಿಸಿ ಕಿರಿಯರಿಗೆ ಮಣೆ ಹಾಕಿದ್ದರಿಂದ ಬೇಸರಗೊಂಡಿರುವ ಅನೇಕ ಸಚಿವರು ಖಾತೆಗಳನ್ನು ಬದಲಾವಣೆ ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿ ಪಟ್ಟು ಹಿಡಿದಿದ್ದಾರೆ.
ಇನ್ನೊಂದೆಡೆ ಸಚಿವ ಶ್ರೀರಾಮುಲು ತಮಗೆ ನೀಡಿರುವ ಖಾತೆಯನ್ನು ಬದಲಾಯಿಸಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಇನ್ನು ವಾಲ್ಮೀಕಿ ಸಮುದಾಯದವರು ರಾಮುಲುಗೆ, ರಾಯಣ್ಣ ಬ್ರಿಗೇಡ್ನವರು ಕೆ.ಎಸ್.ಈಶ್ವರಪ್ಪಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ಒಂದು ವೇಳೆ ಕೊಡದಿದ್ದರೆ ಬಿಜೆಪಿಗೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ದೆಹಲಿ ವರಿಷ್ಠರ ಸೂಚನೆಯಂತೆ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದು ಬಿಎಸ್ವೈ ಹೈಕಮಾಂಡ್ ಕಡೆ ಬೊಟ್ಟು ಮಾಡುತ್ತಿರುವುದರಿಂದ ಉಗುಳಲೂ ಆಗದೆ, ನುಂಗಲೂ ಆಗದ ಸ್ಥಿತಿಯಲ್ಲಿರುವ ಸಚಿವರು ಒಳಗೊಳಗೇ ಕೊತ ಕೊತ ಕುದಿಯುತ್ತಿದ್ದಾರೆ.
ಕಳೆದ ರಾತ್ರಿಯೇ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ನಿವಾಸಕ್ಕೆ ಆಗಮಿಸಿದ್ದ ಅನೇಕ ಸಚಿವರು ಖಾತೆ ಹಂಚಿಕೆ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ನಮಗೆ ಉನ್ನತವಾದ ಖಾತೆಗಳು ಸಿಗಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೆವು. ಕಡೇಪಕ್ಷ ನಮ್ಮ ಅನುಭವ, ಹಿರಿತನಕ್ಕೆ ತಕ್ಕಂತೆ ಖಾತೆ ನೀಡುತ್ತಿರೆಂದು ನಿರೀಕ್ಷೆ ಹೊಂದಿದ್ದೆವು. ಈಗ ಕೊಟ್ಟಿರುವ ಖಾತೆಗಳಲ್ಲಿ ಯಾವ ರೀತಿ ಕೆಲಸ ಮಾಡಬೇಕೆಂಬುದೇ ತಿಳಿಯುತ್ತಿಲ್ಲ. ಎಲ್ಲದಕ್ಕೂ ವರಿಷ್ಠರ ಕಡೆ ಕೈ ತೋರಿಸಿದರೆ ನಾವು ಪಕ್ಷದಲ್ಲಿ ಹೇಗೆ ಇರಬೇಕೆಂದು ಅನೇಕರು ಅಳಲು ತೋಡಿಕೊಂಡಿದ್ದಾರೆ.
ಹಿರಿಯರನ್ನು ಕಡೆಗಣಿಸಿ ಕಿರಿಯರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದರ ಜೊತೆ ಸಂಪನ್ಮೂಲ ಖಾತೆಗಳನ್ನು ನೀಡಲಾಗಿದೆ. ಅದರಲ್ಲೂ ಕಳೆದ ವಿಧಾನಸಭೆ ಚುನಾವಣೆ ವೇಳೆ ಪರಾಭವಗೊಂಡಿರುವ ಲಕ್ಷ್ಮಣ್ಸವದಿಗೆ ಸಾರಿಗೆ ಖಾತೆಜೊತೆಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿರುವುದು ಎಷ್ಟರಮಟ್ಟಿಗೆ ಸರಿ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ.
ಹೈಕಮಾಂಡ್ ನಿರ್ದೇಶನದಂತೆ ನಾನು ಸಂಪುಟ ವಿಸ್ತರಣೆ ಮಾಡಿ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದೇನೆ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯತೆ ಕಾಪಾಡಲು ವರಿಷ್ಠರು ತೆಗೆದುಕೊಂಡಿರುವ ತೀರ್ಮಾನವನ್ನು ನಾನು ಪಾಲಿಸಲೇಬೇಕು. ನನ್ನ ಪರಿಸ್ಥಿತಿಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಿ ಎಂದು ಬಿಎಸ್ವೈ ಕೂಡ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.
ನಾವು ಕೇಳಿದ ಖಾತೆಯೇ ಒಂದು.ನೀಡಿರುವ ಖಾತೆಯೇ ಇನ್ನೊಂದು.ಇದರಿಂದ ನಮ್ಮ ಕ್ಷೇತ್ರಗಳಲ್ಲೂ ಕೂಡ ಕೆಲಸ ಮಾಡಲು ಸಾಧ್ಯವಿಲ್ಲ. ಕಡೇ ಪಕ್ಷನಮ್ಮ ಹಿರಿತನವನ್ನಾದರೂ ಪರಿಗಣಿಸಿ ಸ್ಥಾನಮಾನ ನೀಡಬಹುದಿತ್ತು. ನೀವು ನೀಡಿರುವ ಖಾತೆಗಳನ್ನು ನೋಡಿದರೆ ನಾವು ಯಾವ ಕಾರಣಕ್ಕಾಗಿ ಸಚಿವಸ್ಥಾನದಲ್ಲಿ ಮುಂದುವರೆಯಬೇಕೆಂದು ಸಚಿವರು ಅಲವತ್ತು ಕೊಂಡಿದ್ದಾರೆ.
ಉಲ್ಟಾ ಹೊಡೆದ ರವಿ:
ಇನ್ನು ಕಳೆದ ರಾತ್ರಿ ಖಾತೆ ಹಂಚಿಕೆಯಾದ ಒಂದೇ ಘಂಟೆಯಲ್ಲಿ ಸಚಿವಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದ ಪ್ರವಾಸೋದ್ಯಮ ಮತ್ತು ಕನ್ನಡ ಹಾಗೂ ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿ ತಮ್ಮನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ನಾನು ಮಂತ್ರಿ ಸ್ಥಾನವನ್ನೇ ಕೇಳಿರಲಿಲ್ಲ. ಬ್ಲಾಕ್ ಅಧ್ಯಕ್ಷನಾಗಿದ್ದ ನನಗೆ ಪಕ್ಷ ಎಲ್ಲವೂ ಕೊಟ್ಟಿದೆ. ಪಕ್ಷ ನಿಷ್ಠೆ ಬಂದಾಗ ನನ್ನ ಬಗ್ಗೆ ಯಾರಿಗೂ ಅನುಮಾನ ಬೇಡ. ಅಧಿಕಾರಕ್ಕಾಗಿ ನಾನು ಯಾರ ಮನೆಯ ಬಳಿಯೂ ಹೋದವನಲ್ಲ ಎನ್ನುವ ಮೂಲಕ ಕೊಟ್ಟಿರುವ ಖಾತೆಯನ್ನು ನಿಭಾಯಿಸುತ್ತೇನೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಬಿಜೆಪಿ ವಿರುದ್ಧ ಅಭಿಯಾನ:
ಸಚಿವ ಶ್ರೀರಾಮುಲು ಮತ್ತು ಕೆ.ಎಸ್.ಈಶ್ವರಪ್ಪಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ. ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕ ಶ್ರೀರಾಮುಲು ಹಾಗೂ ಕುರುಬ ಸಮುದಾಯದ ಮುಖಂಡ ಕೆ.ಎಸ್.ಈಶ್ವರಪ್ಪ ಡಿಸಿಎಂ ಸ್ಥಾನ ನೀಡುವಂತೆ ಬೆಂಬಲಿಗರು ಬಿಜೆಪಿ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ಹಾಗೂ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯ ಬಿಜೆಪಿ ಪರ ನಿಂತಿದೆ. ಇದಕ್ಕೆ ರಾಮುಲು ಅವರ ನಾಯಕತ್ವವೇ ಕಾರಣ. ಅವರನ್ನು ಉಪಮುಖ್ಯಮಂತ್ರಿ ಮಾಡಬೇಕೆಂದು ಅಭಿಮಾನಿಗಳು ಅಭಿಯಾನ ನಡೆಸುತ್ತಿದ್ದಾರೆ.
ಇತ್ತ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಮೂಲಕ ಈಶ್ವರಪ್ಪಗೆ ಡಿಸಿಎಂ ಸ್ಥಾನ ನೀಡಬೇಕೆಂದು ಕಳೆದ ರಾತ್ರಿಯಿಂದಲೇ ಅಭಿಯಾನ ಆರಂಭವಾಗಿದೆ. ಹಿಂದುಳಿದ ವರ್ಗಗಳ ಮುಖಂಡರಾಗಿರುವ ಈಶ್ವರಪ್ಪ ಪಕ್ಷದ ನಿಷ್ಠಾವಂತರು. ಅವರನ್ನು ಕಡೆಗಣಿಸಿ ಕಿರಿಯರಿಗೆ ಡಿಸಿಎಂ ಸ್ಥಾನ ನೀಡಿರುವುದು ಎಷ್ಟರಮಟ್ಟಗೆ ಸರಿ?ಕೂಡಲೇ ಅನ್ಯಾಯವನ್ನು ಸರಿಪಡಿಸದಿದ್ದರೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಎಚ್ಚರಿಸಿದ್ದಾರೆ.
ಹೀಗೆ ಖಾತೆಗಳ ಹಂಚಿಕೆ ನಂತರ ಇದೀಗ ಕ್ಯಾತೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಸ್ವರೂಪ ಪಡೆಯಲಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.