ಬೆಂಗಳೂರು, ಆ.27- ರಾಜಕಾಲುವೆಗಳ ಹೂಳು ತೆಗೆಯುವುದರಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತಂತೆ ನಗರಾಭಿವೃದ್ಧಿ ಇಲಾಖೆ ಮುಖ್ಯ ಜಾಗೃತ ಅಧಿಕಾರಿಗಳು ಇಂದು ಬಿಬಿಎಂಪಿಯ ಎಂಜಿನಿಯರ್ಗಳನ್ನು ವಿಚಾರಣೆ ನಡೆಸಲಿದ್ದಾರೆ.
ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ಹೂಳು ತೆಗೆದಿರುವುದರಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಮುಖ್ಯಸ್ಥ ಎಸ್.ಅಮರೇಶ್ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.
ಅಮರೇಶ್ ಅವರು ಸಲ್ಲಿಸಿರುವ ದೂರಿನ ಸಂಬಂಧ ವಿಕಾಸಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆಯ ಮುಖ್ಯ ಜಾಗೃತ ಅಧಿಕಾರಿಗಳ ಕೊಠಡಿಯಲ್ಲಿ ಬಿಬಿಎಂಪಿ ಎಂಜಿನಿಯರ್ಗಳ ವಿಚಾರಣೆ ನಡೆಯಲಿದೆ.
ಪೂರಕ ಮಾಹಿತಿ ಮತ್ತು ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬೃಹತ್ ನೀರು ಗಾಲುವೆ ಮುಖ್ಯ ಅಭಿಯಂತರರು ಹಾಗೂ ಪಾಲಿಕೆಯ ಎಲ್ಲ ವಲಯಗಳ ಮುಖ್ಯ ಅಭಿಯಂತರರುಗಳಿಗೆ ಮುಖ್ಯ ಜಾಗೃತ ಅಧಿಕಾರಿ ಕೆ.ಎ.ಹಿದಾಯತ್ವುಲ್ಲಾ ನೋಟಿಸ್ ಜಾರಿ ಮಾಡಿದ್ದಾರೆ.