ಅನರ್ಹ ಶಾಸಕರ ಪ್ರಕರಣ-ಅರ್ಜಿ ವಿಚಾರಣೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳಲು ನಿರಾಕರಿಸಿದ ಸುಪ್ರೀಂಕೋರ್ಟ್

ಬೆಂಗಳೂರು, ಆ.26-ಅನರ್ಹ ಶಾಸಕರ ಪ್ರಕರಣವನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿರುವುದರಿಂದ 17 ಮಂದಿ ಕಾಂಗ್ರೆಸ್-ಜೆಡಿಎಸ್‍ನ ಬಂಡಾಯಗಾರರು ಅತಂತ್ರಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರಕ್ಕೂ ಬಿಸಿತುಪ್ಪವಾಗಿದ್ದಾರೆ.

ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್‍ನ 13, ಜೆಡಿಎಸ್‍ನ 3 ಮತ್ತು ಒಬ್ಬ ಪಕ್ಷೇತರ ಶಾಸಕರನ್ನು ಸ್ಪೀಕರ್ ರಮೇಶ್‍ಕುಮಾರ್ ಒಂದು ತಿಂಗಳ ಹಿಂದೆ ಅನರ್ಹಗೊಳಿಸಿದ್ದರು.

ಈ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ಠಿಕಾಣಿ ಹೂಡಿದ್ದರು. ಅವರ ಮನವೊಲಿಸಿ ವಾಪಸ್ ಕರೆತರಲು ಜೆಡಿಎಸ್-ಕಾಂಗ್ರೆಸ್‍ನಾಯಕರು ನಡೆಸಿದ ಹಲವು ರೀತಿಯ ಕಸರತ್ತುಗಳು ವಿಫಲವಾಗಿದ್ದವು.ಅಂತಿಮವಾಗಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರಸರ್ಕಾರ ಪತನವಾಗಿತ್ತು.

ಸಂಖ್ಯಾಬಲದ ಮೇಲೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಆದರೆ ಸ್ಪೀಕರ್ ರಮೇಶ್‍ಕುಮಾರ್ ಅವರು ರಾಜೀನಾಮೆ ನೀಡಿದ 17 ಮಂದಿ ಶಾಸಕರನ್ನು ಪಕ್ಷಾಂತರನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿದರು. ರಮೇಶ್‍ಕುಮಾರ್ ಅವರ ತೀರ್ಪಿನ ಅನುಸಾರ 15ನೇ ವಿಧಾನಸಭೆ ಅವಧಿ ಅಂದರೆ 2023ರವರೆಗೆ ಈ 17 ಮಂದಿ ಶಾಸಕರು ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ. ಸಚಿವ ಸ್ಥಾನ, ನಿಗಮ ಮಂಡಳಿ ಸೇರಿದಂತೆ ಯಾವುದೇಪ್ರಮುಖ ಸ್ಥಾನ ಮಾನಗಳನ್ನು ಅಲಂಕರಿಸುವಂತಿಲ್ಲ. ಹೀಗಾಗಿ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗುವ ಹಾಗೂ ವಿವಿಧ ಹುದ್ದೆಗಳನ್ನು ಅಲಂಕರಿಸುವ ಕನಸು ಕಾಣುತ್ತಿದ್ದ 17 ಮಂದಿಗೆ ಭಾರೀ ನಿರಾಸೆಯಾಗಿತ್ತು.
ಕೂಡಲೇ ಸುಪ್ರೀಂಕೋರ್ಟ್‍ನ ಮೆಟ್ಟಿಲೇರಿದ್ದರು. ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಇದರಿಂದ ಬಂಡಾಯಗಾರರು ಬೀದಿಗೆ ಬಿದ್ದಂತಾಗಿದೆ.

ಒಂದೆಡೆ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ, ಖಾತೆಗಳಿಗಾಗಿ ಭಾರೀ ಕ್ಯಾತೆ ಆರಂಭವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸರ್ಕಾರ ರಚನೆಗೆ ಪ್ರಮುಖ ಕಾರಣಕರ್ತರಾದ ಈ 17 ಮಂದಿಯ ಹಿತರಕ್ಷಣೆಗಾಗಿ ಸಂಪುಟದಲ್ಲಿ ಇನ್ನೂ 16 ಸ್ಥಾನಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ.
ಈಗಾಗಲೇ 17 ಮಂದಿ ಬಿಜೆಪಿ ಶಾಸಕರು ಸಚಿವರಾಗಿ ಕೆಲಸ ಆರಂಭಿಸಿದ್ದಾರೆ.ಸರ್ಕಾರ ರಚನೆಯಾಗಲು ಕಾರಣಕರ್ತರಾದ ಅತೃಪ್ತರು ಇತ್ತ ಶಾಸಕ ಸ್ಥಾನವೂ ಇಲ್ಲ, ಸಚಿವ ಸ್ಥಾನವೂ ಇಲ್ಲದೆ ಕೈ ಕೈ ಹಿಸುಕಿಕೊಳುತ್ತಿದ್ದಾರೆ.

ಸುಪ್ರೀಂಕೋರ್ಟ್‍ನಲ್ಲಿ ತುರ್ತು ವಿಚಾರಣೆ ಸಾಧ್ಯವಾಗದೆ ಇರುವುದರಿಂದ ಈಗ ಏನೂ ಮಾಡಲಾಗದೆ ಕಾದುನೋಡುವ ನಿರ್ಧಾರಕ್ಕೆ ಬಂದಿದ್ದಾರೆ. ಒಂದು ರೀತಿಯಲ್ಲಿ ಅನರ್ಹ ಶಾಸಕರಲ್ಲಿ ಹತಾಶೆಯ ಪರಿಸ್ಥಿತಿ ಇದೆ ಎಂದು ಹೇಳಲಾಗುತ್ತಿದೆ.
ಈಗ 17 ಮಂದಿ ಶಾಸಕರೂ ಅಲ್ಲzಇರುವುದರಿಂದ ಬಿಜೆಪಿ ಸರ್ಕಾರವನ್ನು ಬೀಳಿಸುವ ಬೆದರಿಕೆ ಹಾಕಲು ಸಾಧ್ಯವಿಲ್ಲ. ಮಾನವೀಯತೆ ಆಧಾರದ ಮೇಲೆ ಬಿಜೆಪಿ ನಾಯಕರು ನೀಡುವ ನೆರವನ್ನು ಪಡೆದುಕೊಂಡು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಶಾಸಕರಾಗಿದ್ದಾಗ ತಮ್ಮ ಮಾತೃ ಪಕ್ಷಗಳಲ್ಲಿ ಅಬ್ಬರಿಸಿ ಬೊಬ್ಬಿರಿದ 17 ಮಂದಿ ಈಗ ಧ್ವನಿಯಿಲ್ಲದೆ ಮೂಕವೇದನೆ ಅನುಭವಿಸುವಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ