ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ದೃಡಪಡಿಸಿದ ಎಫ್‍ಎಸ್‍ಎಲ್ ವರದಿ

ಮಂಗಳೂರು, ಆ.26-ಪ್ರತಿಷ್ಠಿತ ಕೆಫೆ ಕಾಫಿ ಡೇ (ಸಿಸಿಡಿ) ಸಂಸ್ಥೆಯ ಮಾಲೀಕ ಮತ್ತು ಹೆಸರಾಂತ ಉದ್ಯಮಿ ಸಿದ್ಧಾರ್ಥ್ ಅವರು ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವುದು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‍ಎಸ್‍ಎಲ್) ವರದಿಯಿಂದ ದೃಢಪಟ್ಟಿದೆ.
ಮಂಗಳೂರಿನಲ್ಲಿ ಇಂದು ಬೆಳಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಈ ವಿಷಯತಿಳಿಸಿದ ಪೆÇಲೀಸ್ ಆಯುಕ್ತ ಪಿ.ಎಸ್.ಹರ್ಷ, ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಎಫ್‍ಎಸ್‍ಎಲ್ ವರದಿ ದೃಢಪಡಿಸಿದೆ ಎಂದರು.

ಅವರು ನೀರಿನಲ್ಲಿ ಮುಳುಗಿ ಸಾವಿಗೆ ಶರಣಾಗಿದ್ದಾರೆ.ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಸಿದ್ಧಾರ್ಥ್ ಅವರ ಶ್ವಾಸಕೋಶಗಳಲ್ಲಿ ನೀರು ತುಂಬಿಕೊಂಡಿರುವುದು ಕಂಡುಬಂದಿದೆ.ಇವೆರಡೂ ಒಂದಕ್ಕೊಂದು ತಾಳೆಯಾಗುತ್ತಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ದಿಟ ಎಂದು ಹರ್ಷ ಹೇಳಿದರು.
ಮಂಗಳೂರಿನ ಉಲ್ಲಾಳ ಬಳಿ ನೇತ್ರಾವತಿ ಸೇತುವೆಯಿಂದ ಜು.29 ರಂದು ನದಿಗೆ ಹಾರಿ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದರು.ಸುದೀರ್ಘ ಶೋಧ ನಂತರ ಎರಡು ದಿನಗಳ ಬಳಿಕ ನೇತ್ರಾವತಿ ನದಿಯಲ್ಲಿ ಅವರ ಶವ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಕೋಟ್ಯಂತರ ರೂ. ಸಾಲ ಹಾಗೂ ವಾಣಿಜ್ಯ ವಹಿವಾಟಿನ ನಷ್ಟದಿಂದ ತೀವ್ರ ಬೇಸತ್ತಿದ್ದ ಸಿದ್ಧಾರ್ಥ್ ಜು.29 ರಂದು ಬೆಂಗಳೂರಿನಿಂದ ಸಕಲೇಶಪುರದ ತಮ್ಮ ಕಾಫಿ ಎಸ್ಟೇಟ್‍ಗೆ ತೆರಳುವುದಾಗಿ ತಿಳಿಸಿ ಹೋಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ