ಬೆಂಗಳೂರು, ಆ.26- ಬಿಜೆಪಿ ಹಿರಿಯ ನಾಯಕ ಅರವಿಂದ ಲಿಂಬಾವಳಿಯವರಿಗೆ ಸಚಿವ ಸ್ಥಾನ ನೀಡುವಂತೆ ಸಾಮಾಜಿಕ ನ್ಯಾಯ ಪರಿಷತ್ ಅಧ್ಯಕ್ಷ ಅನಂತರಾಯಪ್ಪ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
ಅರವಿಂದ ಲಿಂಬಾವಳಿಯವರು ಕೇವಲ ಬೋವಿ ಜನಾಂಗದ ನಾಯಕರಲ್ಲ. ಅವರು ಸಮಸ್ತ ದಲಿತ ಸಮುದಾಯದ ನಾಯಕರು.ಬಿಜೆಪಿಯನ್ನು ಕಟ್ಟಿ ಬೆಳೆಸಲು ಮೊದಲಿನಿಂದ ಯಡಿಯೂರಪ್ಪನವರ ಜೊತೆ ಹೆಗಲಿಗೆ ಹೆಗಲು ಕೊಟ್ಟು ದುಡಿದಿದ್ದಾರೆ.ಪಕ್ಷಕ್ಕಾಗಿ ದುಡಿದಿರುವ ಇಂತಹ ಮುಂಚೂಣಿ ನಾಯಕರಿಗೆ ಸಚಿವ ಸ್ಥಾನ ತಪ್ಪಿಸಿರುವುದು ದಲಿತ ಸಮುದಾಯದಲ್ಲಿ ನಿರಾಸೆ ಉಂಟು ಮಾಡಿದೆ ಹಾಗೂ ಅಸಮಾಧಾನ ಮೂಡಲು ಕಾರಣವಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಯಲ್ಲಿ ಪ್ರಬಲ ಉಪ ಜಾತಿಯಾದ ಬಲಗೈ ಸಮುದಾಯವನ್ನೂ ಕೂಡ ನಿರ್ಲಕ್ಷಿಸಲಾಗಿದೆ.ನಾಗೇಶ್ ಅವರಿಗೆ ಪಕ್ಷೇತರ ಶಾಸಕ ಎಂಬ ಕಾರಣಕ್ಕೆ ಸಚಿವ ಸ್ಥಾನ ನೀಡಲಾಗಿದೆಯೇ ಹೊರತು ಅವರನ್ನು ಬಲಗೈ ಜನಾಂಗದ ಕೋಟಾದಲ್ಲಿ ಪರಿಗಣಿಸುವುದು ಸರಿಯಲ್ಲ. ಬಿಜೆಪಿಯಿಂದ ಬಲಗೈ ಜನಾಂಗದ 5 ಶಾಸಕರು ಗೆದ್ದಿದ್ದಾರೆ.ಹಿರಿತನದ ಆಧಾರದಲ್ಲಿ ನೆಹರು ಓಲೇಕಾರ್, ಎಂ.ಪಿ.ಕುಮಾರಸ್ವಾಮಿ ಹಾಗೂ ಎಸ್.ಅಂಗಾರ ಇವರುಗಳ ಪೈಕಿ ಯಾರಾದರೊಬ್ಬರಿಗೆ ಬಲಗೈ ಕೋಟಾದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಅನಂತರಾಯಪ್ಪ ಮನವಿ ಮಾಡಿದ್ದಾರೆ.