ಹಲವೆಡೆ ಪರಿಶೀಲನೆ ನಡೆಸಿದ ಕೇಂದ್ರ ಪ್ರವಾಹ ಅಧ್ಯಯನ ತಂಡ

ಬೆಂಗಳೂರು,ಆ.25- ಉತ್ತರ ಕರ್ನಾಟಕದ ಬೆಳಗಾವಿ, ಚಿಕ್ಕೋಡಿ, ಹುಬ್ಬಳ್ಳಿ ಮುಂತಾದೆಡೆ ಇಂದು ಕೇಂದ್ರ ಪ್ರವಾಹ ಅಧ್ಯಯನ ತಂಡ ಪರಿಶೀಲನೆ ನಡೆಸಿತು.
ಭಾರೀ ಮಳೆ ಮತ್ತು ನೆರೆ ಹಾವಳಿಯಿಂದ ಹತ್ತಾರು ಜನ ಸಾವನ್ನಪ್ಪಿದ್ದು, ಅಪಾರ ಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೆರವಿಗೆ ಬರಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಸಲ್ಲಿಸಿದ ಕಾರಣ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರ ಜಂಟಿ ಗೃಹ ಕಾರ್ಯದರ್ಶಿ ಪ್ರಕಾಶ್ ಅವರ ನೇತೃತ್ವದ 6 ಅಧಿಕಾರಿಗಳ ತಂಡ ಇಂದು ಬೆಳಗಾವಿ ಸರ್ಕೀಟ್ ಹೌಸ್‍ನಲ್ಲಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ನೇತೃತ್ವದಲ್ಲಿ ಸಭೆ ನಡೆಸಿ ನೆರೆ ಪೀಡಿತ ಪ್ರದೇಶಗಳ ಮಾಹಿತಿ ಪಡೆದುಕೊಂಡರು.

ನಂತರ ಚಿಕ್ಕೋಡಿ, ಮಾಂಜ್ರಿ, ಅಂಕಲಿ, ಕಾಗವಾಡ, ಆರೋಗೇರಿ, ರಾಯಭಾಗ, ಗುರ್ಲಾಪುರ ಮಾರ್ಗವಾಗಿ ಗೋಕಾಕ್ ಪ್ರದೇಶಗಳಿಗೆ ಭೇಟಿ ನೀಡಿ ನೆರೆಯಿಂದ ಹಾನಿಗೊಳಗಾದ ಬಗ್ಗೆ ಮಾಹಿತಿ ಪಡೆದರು.

ಮಾಂಜ್ರಾ ಸೇತುವೆ ಕುಸಿದಿರುವುದನ್ನು ವೀಕ್ಷಿಸಿದ ಅಧಿಕಾರಿಗಳು ಪ್ರವಾಹದಿಂದ ಈ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವುದು ಮತ್ತು ವಿದ್ಯುತ್ ಕಂಬಗಳು ಮುರಿದುಬಿದ್ದು ಹಾನಿಯಾಗಿರುವುದರ ಬಗ್ಗೆ ಮಾಹಿತಿ ಸಂಗ್ರಹಿಸಿದರು.ನಂತರ ಸಿರಗುಪ್ಪೆ, ಜುಗುಲ್ ಪ್ರದೇಶಕ್ಕೆ ಭೇಟಿ ನೀಡಿದರು.ಅಲ್ಲಿ ಮನೆಗಳು ಕುಸಿದಿರುವುದನ್ನು ವೀಕ್ಷಿಸಿ ಮಾಹಿತಿ ಪಡೆದರು.

ಮಧ್ಯಾಹ್ನ ಕುಡಚಿ ಬ್ರಿಡ್ಜ್ ಕುಸಿದು ಹೋಗಿರುವುದು ಈ ಪ್ರದೇಶದಲ್ಲಿ ಪ್ರವಾಹದಿಂದ ಬೆಳೆ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದರು. ಗೋಕಾಕ ಪಟ್ಟಣದಲ್ಲಿ ವಾಣಿಜ್ಯ ಮಳಿಗೆಗಳು ಹಾನಿಗೊಳಗಾಗಿರುವುದು ಮತ್ತು ಕುಂಬಾರಗಲ್ಲಿಯಲ್ಲಿ ಮನೆಗಳು ಬಿದ್ದಿರುವುದನ್ನು ವೀಕ್ಷಿಸಿದ ಅವರು, ಪರಿಹಾರ ಕೇಂದ್ರಗಳಿಗೂ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಕೆ.ಜೂನಿಪೇಟೆ ಮಾರ್ಗದಲ್ಲಿರುವ ತೂಗು ಸೇತುವೆಗಾಗಿರುವ ಹಾನಿ ಬಗ್ಗೆ ಮಾಹಿತಿ ಪಡೆದರು.ಸುನ್ನಾಲ್ ಬಳಿ ಹೈಸ್ಕೂಲ್‍ಗಾಗಿರುವ ಹಾನಿ, ರಾಮದುರ್ಗದಲ್ಲಿ ಭಾರೀ ಹಾನಿಯಾಗಿದ್ದು, ರಾಮದುರ್ಗ, ಸವದತ್ತಿ ಸಂಪರ್ಕ ಸೇತುವೆ ಕುಸಿದಿದ್ದು ಮನೆಗಳು ಉರುಳಿಬಿದ್ದಿದ್ದು ಶಾಲಾ ಕಾಲೇಜುಗಳ ಕಟ್ಟಡಗಳಿಗೆ ಧಕ್ಕೆಯಾಗಿದ್ದು ನೇಕಾರಗಲ್ಲಿಯಲ್ಲಿರುವ ವಿದ್ಯುತ್ ಚಾಲಿತ ಮಗ್ಗಗಳು ಹಾಳಾಗಿರುವುದನ್ನು ವೀಕ್ಷಿಸಿದರು.

ಪರಿಸ್ಥಿತಿ ವೀಕ್ಷಿಸಲು ಬಂದ ಅಧಿಕಾರಿಗಳ ಎದುರು ಸಂತ್ರಸ್ಥರು ತಮ್ಮ ಅಳಲು ತೋಡಿಕೊಂಡು ಕಣ್ಣೀರಿಟ್ಟರು.ಸರ್ವಸ್ವವನ್ನು ಕಳೆದುಕೊಂಡ ತಮಗೆ ಪರಿಹಾರ ಒದಗಿಸಿಕೊಡುವಂತೆ ಬೇಡಿಕೊಂಡರು.ಮನೆಗಳು ಮುರಿದು ಬಿದ್ದಿವೆ. ಹೊಲ ಗದ್ದೆಗಳೆಲ್ಲಾ ಹಾಳಾಗಿವೆ. ಶಾಲೆಗಳಿಗೆ ಹೋಗುವ ಮಕ್ಕಳ ಭವಿಷ್ಯ ಮಂಕಾಗಿವೆ. ರಸ್ತೆ, ಸೇತುವೆಗಳೆಲ್ಲ ಕೊಚ್ಚಿ ಹೋಗಿವೆ. ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಿ.ಊರುಗಳನ್ನೇ ನಿರ್ಮಿಸಬೇಕಾಗಿದೆ.ಓಡಾಡಲು ರಸ್ತೆಗಳೇ ಇಲ್ಲದಂತಾಗಿದೆ. ವಿದ್ಯುತ್ ಇಲ್ಲದೆ ಕಷ್ಟವಾಗಿದೆ. ನಿರಾಶ್ರಿತರ ಕೇಂದ್ರಗಳಲ್ಲಿ ಹಲವು ದಿನಗಳಿಂದ ಇದ್ದೇವೆ. ನಮಗೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಿ ಎಂದು ಅಧ್ಯಯನ ತಂಡದ ಅಧಿಕಾರಿಗಳ ಮುಂದೆ ಹಲವರು ಅಲವತ್ತುಕೊಂಡಿದ್ದು ಕಂಡು ಬಂತು.
ಈ ಸಂದರ್ಭದಲ್ಲಿ ಕೇಂದ್ರ ತಂಡದ ಅಧಿಕಾರಿಗಳಾದ ಎಸ್.ಇ.ಮೀನಾ, ಕುನ್ನಸ್ವಾಮಿ, ಜೀತೇಂದ್ರ ಪುನವಾರ್, ವಿಜಯಕುಮಾರ್, ಮಾಣಿಕ್‍ಚಂದ್ರ, ಓ.ಪಿ.ಸುಮನ್, ಸ್ಥಳೀಯ ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ