ಆಡಳಿತ ನಡೆಸುವವರು ಸರಿಯಾಗಿ ನಡೆದುಕೊಳ್ಳಬೇಕಿತ್ತು-ಮಾಜಿ ಸಚಿವ ಎಚ್.ಎಂ.ರೇವಣ್ಣ

ಬೆಂಗಳೂರು, ಆ.25-ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಸಿದ್ದರಾಮಯ್ಯ ಕಾರಣರಲ್ಲ. ಆಡಳಿತ ನಡೆಸುವವರು ಸರಿಯಾಗಿ ನಡೆದುಕೊಳ್ಳಬೇಕಿತ್ತು ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ತಿರುಗೇಟು ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆರೋಪಗಳಿಗೆ ಬೆಂಗಳೂರಿನಲ್ಲಿ ಪ್ರತ್ಯುತ್ತರ ನೀಡಿರುವ ಎಚ್.ಎಂ.ರೇವಣ್ಣ ಅವರು, ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.

ಕಾಂಗ್ರೆಸ್ ಶಾಸಕರು ಕುಮಾರಸ್ವಾಮಿಯವರ ಆಡಳಿತದಿಂದ ಬೇಸತ್ತು ರಾಜೀನಾಮೆ ನೀಡಿದರು. ಸಿದ್ದರಾಮಯ್ಯ ಯಾರನ್ನೂ ಮುಂಬೈಗೆ ಕಳುಹಿಸಲಿಲ್ಲ. ಕಾಂಗ್ರೆಸ್ ಶಾಸಕರು ತಾವಾಗಿಯೇ ಹೋಗಿದ್ದರು.ಆದರೆ ಜೆಡಿಎಸ್ ಶಾಸಕರಾದ ವಿಶ್ವನಾಥ್, ಗೋಪಾಲಯ್ಯ, ನಾರಾಯಣಗೌಡ ಅವರನ್ನು ಸಿದ್ದರಾಮಯ್ಯ ಅವರೇ ಕಳುಹಿಸಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಎಸ್.ಟಿ.ಸೋಮಶೇಖರ್, ಮುನಿರತ್ನ ಅವರು ಸಿದ್ದರಾಮಯ್ಯ ಅವರ ಆಪ್ತರಲ್ಲ. ಮುನಿರತ್ನ ಬಿ.ಕೆ.ಹರಿಪ್ರಸಾದ್ ಅವರ ಬೆಂಬಲಿಗರು. ಸೋಮಶೇಖರ್ ಕಾಂಗ್ರೆಸ್‍ನಲ್ಲಿದ್ದವರು.ಸರ್ಕಾರ ಪತನ ಆದ ಮೇಲೆ ಏನು ಬೇಕಾದರೂ ಹೇಳಬಹುದು.ಆದರೆ ಎರಡೂ ಪಕ್ಷಗಳು ಕೂಡ ಸರ್ಕಾರ ಪತನಕ್ಕೆ ಕಾರಣ.ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.

ಕೆಪಿಎಸ್‍ಸಿ ಸದಸ್ಯರ ನೇಮಕಕ್ಕೆ ಸಿದ್ದರಾಮಯ್ಯ ಬೇಡಿಕೆ ಇಟ್ಟಾಗ, ಜೆಡಿಎಸ್ ಅದನ್ನು ತಿರಸ್ಕರಿಸಿತ್ತು.ಕಾಂಗ್ರೆಸ್‍ಗಿಂತಲೂ ಜೆಡಿಎಸ್ ಶಾಸಕರಿಗೆ ಬಜೆಟ್‍ನ ಅನುದಾನ ನೀಡಲಾಗಿತ್ತು.ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಕಾರಣಕ್ಕಾಗಿ ಜಾತ್ಯತೀತ ಶಕ್ತಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು. ಆನಂತರ ಉಂಟಾದ ಗೊಂದಲಗಳನ್ನು ಸರಿಪಡಿಸಿಕೊಂಡು ಸರ್ಕಾರ ಉಳಿಸಿಕೊಳ್ಳಬೇಕಿತ್ತು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ