ಬೆಂಗಳೂರು,ಆ.25- ಸಮ್ಮಿಶ್ರ ಸರ್ಕಾರ ಪತನದ ನಂತರ ಸೊರಗಿದಂತೆ ಕಂಡು ಬಂದ ಕಾಂಗ್ರೆಸ್ ಮತ್ತೆ ಕ್ರೀಯಾಶೀಲಗೊಳ್ಳಲು ಮುಂದಾಗಿದೆ. ವಿರೋಧ ಪಕ್ಷದ ನಾಯಕನ ಸ್ಥಾನ ಮತ್ತು ಪಕ್ಷದ ಪದಾಧಿಕಾರಿಗಳ ಆಯ್ಕೆ ಸಂಬಂಧ ನಾಳೆ ದೆಹಲಿಯಿಂದ ಬರುವ ನಾಯಕರು ರಾಜ್ಯ ಕಾಂಗೆಸ್ ನಾಯಕರ ಜೊತೆ ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಝಾದ್ ಅವರು ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ. ವಿರೋಧ ಪಕ್ಷದ ನಾಯಕ ಆಯ್ಕೆಗೂ ಮುನ್ನಾ ರಾಜ್ಯದ ಎಲ್ಲಾ ನಾಯಕರ ಜೊತೆ ಚರ್ಚೆ ನಡೆಸಬೇಕು. ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಬಾರದು ಎಂದು ರಾಜ್ಯದ ಹಲವು ನಾಯಕರು ಹೈಕಮಾಂಡ್ ಮೇಲೆ ಒತ್ತಡ ಏರಿದ್ದರಿಂದ ಹೈಕಮಾಂಡ್ ಮಧ್ಯ ಪ್ರವೇಶ ಮಾಡುತ್ತಿದೆ.
ಈಗಾಗಲೇ ಶಾಸಕಾಂಗ ಪಕ್ಷ ನಾಯಕನಾಗಿರುವ ಸಿದ್ದರಾಮಯ್ಯ ಅವರನ್ನೇ ವಿರೋಧ ಪಕ್ಷದ ನಾಯಕನಾಗಿ ಮುಂದುವರೆಸಲು ಹೈಕಮಾಂಡ್ ಈ ಮೊದಲು ಇಚ್ಚಿಸಿತ್ತು.ಆದರೆ ಕೆಲ ನಾಯಕರ ಆಕ್ಷೇಪ ಅದಕ್ಕೆ ಅಡ್ಡಗಾಲಾಗಿದೆ.
ರಾಷ್ಟ್ರ ರಾಜಕಾರಣದಲ್ಲಾದ ಬದಲಾವಣೆಗಳಿಂದ ಸಿದ್ದರಾಮಯ್ಯ ಅವರಿಗೆ ಬೆಂಬಲವಾಗಿದ್ದ ರಾಹಲ್ ಗಾಂಧಿ ಅಧ್ಯಕ್ಷ ಗಾದಿಯಿಂದ ನಿರ್ಗಮಿಸಿದ್ದಾರೆ.ಈಗ ಸೋನಿಯಾ ಗಾಂಧಿಯವರು ಅಧ್ಯಕ್ಷರಾಗಿದ್ದು, ಇದೇ ಸಂದರ್ಭವನ್ನು ಬಳಸಿಕೊಂಡು ಹಳೆಯ ಕಾಂಗ್ರೆಸಿಗರು ತಮ್ಮದೇ ರೀತಿಯಲ್ಲಿ ಲಾಬಿ ಮುಂದುವರೆಸಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕತ್ವದಲ್ಲಿ ಒಂದು ರೀತಿಯಲ್ಲಿ ಗೊಂದಲಗಳಿವೆ. ನೆರೆ ಹಾಗೂ ಪ್ರವಾಹದಿಂದ ಸುಮಾರು 22 ಜಿಲ್ಲೆಗಳು ಸಂತ್ರಸ್ಥವಾಗಿವೆ. ಹೊಸದಾಗಿ ಅಧಿಕಾರಕ್ಕೆ ಬಂದ ಬಿಜೆಪಿ 24 ದಿನ ಕಳೆದರೂ ಸಚಿವ ಸಂಪುಟ ವಿಸ್ತರಣೆ ಮಾಡಿರಲಿಲ್ಲ. ಇತ್ತೀಚೆಗೆ 17 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತಾದರೂ ವಾರವಾದರೂ ಖಾತೆ ಹಂಚಲಾಗಿಲ್ಲ. ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ.
ವಿಪಕ್ಷಕ್ಕೆ ಇವೇಲ್ಲಾ ಭ್ರಹ್ಮಾಸ್ತ್ರಗಳೆ ಆಗಿದ್ದರೂ ಕಾಂಗ್ರೆಸ್ ತುಟಿಪಿಟಿಕ್ ಎನ್ನದೆ ಮೌನಕ್ಕೆ ಶರಣಾಗಿದೆ.ಸರ್ಕಾರದ ವಿರುದ್ಧ ಯಾರು ಮಾತನಾಡಬೇಕು ಎಂಬ ಗೊಂದಲವೇ ಕಾಂಗ್ರೆಸ್ನಲ್ಲಿ ಹೆಚ್ಚಾದಂತಿದೆ.ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರೇ ಮಾತನಾಡಲಿ ಎಂದು ಇತರ ನಾಯಕರು ಸುಮ್ಮನಿದ್ದಾರೆ.ಸಿದ್ದರಾಮಯ್ಯ ಅವರು ಸರ್ಕಾರವನ್ನು ಟೀಕಿಸುವ ಬದಲು ದೋಸ್ತಿ ಪಕ್ಷವಾದ ಜೆಡಿಎಸ್ನ್ನು ಟೀಕಿಸುವುದರಲ್ಲಿ ಹೆಚ್ಚು ಬ್ಯೂಸಿಯಾಗಿದ್ದಾರೆ.
ಕಾಂಗ್ರೆಸ್ ಕೆಲವು ತಂಡಗಳನ್ನು ಮಾಡಿ ನೆರೆ ಹಾಗೂ ಪ್ರವಾಹ ಸಂತ್ರಸ್ಥರ ನೆರವಿಗೆ ಕಳುಹಿಸಿಕೊಟ್ಟಿತ್ತು.ತಂಡದಲ್ಲಿ ಬಹುತೇಕ ಸದಸ್ಯರು ಒಟ್ಟಾಗಿ ಹೋಗದೆ ತಮ್ಮ ಪಾಡಿಗೆ ತಾವಿದ್ದು ಬಿಟ್ಟಿದ್ದಾರೆ. ಕಾಂಗ್ರೆಸ್ ತಂಡದ ಅಧ್ಯಯನ ಪ್ರವಾಸವೂ ನೆಪ ಮಾತ್ರಕ್ಕೆ ಎಂಬಂತಾಗಿದೆ.ಸರ್ಕಾರದ ವಿಫಲತೆಯನ್ನು ಎತ್ತಿ ತೋರಿಸಿ ಸರಿ ದಾರಿಗೆ ತರಬೇಕಾದ ವಿಪಕ್ಷವೇ ಗೊಂದಲದಲ್ಲಿ ಮುಳುಗಿದೆ.
ಇನ್ನೂ ಜೆಡಿಎಸ್ ನಾಯಕರಿಗೆ ಪ್ರವಾಹ ಮತ್ತು ನೆರೆ ಸಂತ್ರಸ್ಥರಿಗಿಂತ ಕಾಂಗ್ರೆಸ್ ನಾಯಕರನ್ನು ಟೀಕಿಸುವುದೆ ಮುಖ್ಯ ಎನಿಸಿದಂತಿದೆ.ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ನಾಯಕರು ಯಡಿಯೂರಪ್ಪ ಸರ್ಕಾರದ ಬಗ್ಗೆ ಮೃಧು ನಿಲುವು ತಾಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮೂಲ ಕಾಂಗ್ರೆಸಿಗರನ್ನೇ ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಬೇಕು ಎಂಬ ಒತ್ತಡಗಳು ಹೆಚ್ಚಾಗಿವೆ. ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್, ಡಾ.ಜಿ.ಪರಮೇಶ್ವರ್, ವಿಧಾನಸಭೆಯ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಮತ್ತಿತರರು ವಿಪಕ್ಷ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅಂತಿಮವಾಗಿ ಸಿದ್ದರಾಮಯ್ಯ ಅವರೇ ಹೈಕಮಾಂಡ್ನ ಆಯ್ಕೆಯಾದರೂ ಆಶ್ಚರ್ಯವಿಲ್ಲ.
ಈ ಮಧ್ಯೆ ಪಕ್ಷದ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು ಎಂಬ ಬೇಡಿಕೆ ಇದೆ.ನಾಳೆ ನಗರಕ್ಕೆ ಆಗಮಿಸುವ ವರಿಷ್ಠರು ಪಕ್ಷದ ಪದಾಧಿಕಾರಿಗಳ ನೇಮಕದ ಸಂಬಂಧವೂ ರಾಜ್ಯ ನಾಯಕರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.